ನವಜಾತ ಶಿಶುವನ್ನು ಜೀವಂತ ಹೂತ ಹೆತ್ತಬ್ಬೆ !
ರೈತನಿಂದಾಗಿ ಮಗು ಅದೃಷ್ಟವಶಾತ್ ಪಾರು

ಇಂದೋರ್, ಜೂನ್ 16: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನವಜಾತ ಶಿಶುವೊಂದನ್ನು ಹೊಲದಲ್ಲಿ ಹೂತು ಹೋಗಿದ್ದ ಘಟನೆಯೊಂದು ವರದಿಯಾಗಿದೆ. ರೈತ ಪಪ್ಪೂ ಎಂಬಾತ, ಬೆಳಗ್ಗೆ ತನ್ನ ದನಕರುಗಳನ್ನು ಮೇಯಿಸಲು ತಂದಿದ್ದಾಗ ಕಾಲಿಗೆ ಏನೋ ತೊಡರಿಕೊಂಡಂತಾಗಿತ್ತು. ಅದಕ್ಕೆ ಒದ್ದಾಗ ಮಗುವಿನ ಅಳು ಕೇಳಿ ಬೆಚ್ಚಿ ಬಿದ್ದಿದ್ದ.
ಕೂಡಲೇ ಹತ್ತಿರದ ಹೊಲದಲ್ಲಿ ಕೆಲಸಮಾಡುತ್ತಿದ್ದ ಪಾರಸಿಂಗ್‌ನನ್ನು ಕೂಗಿ ಕರೆದಿದ್ದಾನೆ. ಅವರಿಬ್ಬರು ಸೇರಿ ಅಳುವ ಸದ್ದು ಬಂದಲ್ಲಿಂದ ಮಣ್ಣನ್ನು ಸರಿಸಿದ್ದಾರೆ. ಆಗ ಅವರಿಗೆ ಜೀವಂತ ಇದ್ದ ಮಗುವೊಂದು ಸಿಕ್ಕಿದೆ. ಇಬ್ಬರೂ ಮಗುವನ್ನು ಎತ್ತಿಕೊಂಡುಮೊದಲು ಮನೆಗೆ ಬಂದರು. ಹಾಲು ಕುಡಿಸಿದರು, ನಂತರ ರಾಜಗಡ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು.
ಆನಂತರ ಮಗುವನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯೆ ಈ ಮಗು ಇಂದು ಬೆಳಗ್ಗೆ ಹುಟ್ಟಿದೆ ಎಂದು ಘೋಷಿಸಿದ್ದಾರೆ. ತೂಕ ಕಡಿಮೆಯಿದ್ದ ಮಗುವನ್ನು ವಿಶೇಷನಿಗಾಘಟಕದಲ್ಲಿರಿಸಲಾಗಿದೆ. ರೈತ ಪಪ್ಪೂ ವಸುನೀಯಾಗೆ ಇಬ್ಬರುಪುತ್ರರಿಯರಿದ್ದಾರೆ. ಆದರೂ ಅವರ ಪತ್ನಿ ಶರ್ಮಾಬಾಯಿ ಈ ಮಗು ನಮಗೆ ಸಿಕ್ಕಿದೆ ನಾವೇ ಸಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಮಗುವನ್ನು ಪಡೆಯಬೇಕಿದ್ದರೆ ಕಾನೂನುಪ್ರಕ್ರಿಯೆಯನ್ನು ಪೂರೈಸಬೇಕೆಂದು ವೈದ್ಯರು ಅವರಿಗೆ ಹೇಳಿದ್ದಾರೆ.







