ಹಾಸನ: ಪ್ಲಾಸ್ಟಿಕ್ ಮಾರಾಟ ಮಳಿಗೆಗಳ ಮೇಲೆ ದಾಳಿ
.jpg)
ಹಾಸನ, ಜೂ.16: ನಗರಸಭೆಯ ಅಧಿಕಾರಿಗಳು 40ಕ್ಕೂ ಹೆಚ್ಚು ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ 20 ಸಾವಿರ ರೂ.ಗೂ ಅಧಿಕ ದಂಡ ವಿಧಿಸಿ, ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದಲ್ಲಿ ಯಾರು ಕೂಡಾ ಪ್ಲಾಸ್ಟಿಕ್ ವ್ಯಾಪಾರ ಮಾಡಬಾರದು ಹಾಗೂ ಕೊಂಡುಕೊಳ್ಳಬಾರದು ಎಂದು ನಗರಸಭೆಯಿಂದ ಎಚ್ಚರಿಕೆ ನೀಡಲಾಗಿದ್ದರೂ ಇನ್ನು ಕೂಡ ಅನೇಕ ಅಂಗಡಿಗಳಲ್ಲಿ ವ್ಯಾಪಾರ ಮುಂದುವರಿದಿದೆ. ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಬಗ್ಗೆ ಜನತೆಯೇ ಕರೆ ಮಾಡಿ ನಗರಸಭೆಗೆ ತಿಳಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನಿಂದಲೇ ಪರಿಶೀಲನೆ ನಡೆಸಲಾಯಿತು.
ನಗರದ ದೊಡ್ಡಗರಡಿ ಬೀದಿಯ ಪಟೇಲ್ ಟ್ರೇಡರ್ಸ್‌ನಲ್ಲಿ ಎರಡಕ್ಕೂ ಹೆಚ್ಚು ಚೀಲಗಳಲ್ಲಿ ಪ್ಲಾಸ್ಟಿಕ್ ದೊರಕಿತು. ಇದೆ ರೀತಿ ನಾನಾ ಅಂಗಡಿಗಳಲ್ಲಿ ಇದ್ದುದರಿಂದ ಎಲ್ಲವನ್ನೂ ವಶಪಡಿಸಿಕೊಂಡು ಅವರಿಗೆ ದಂಢ ವಿಧಿಸಿ, ಮಾಲಕ ಪಟೇಲ್ ಹಾಗೂ ಆರ್.ಸಿ. ರಸ್ತೆಯಲ್ಲಿರುವ ಇಮಾಯಿನ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ಕೊಡಲಾಗಿದ್ದರೂ ಕೂಡ ಒಳ ಮಾರ್ಗದಲ್ಲಿ ನಿರಂತರವಾಗಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಸಂಜೆ ಮತ್ತು ರಾತ್ರಿ ಸಮಯದಲ್ಲಿ ಪ್ಲಾಸ್ಟಿಕ್ ಸಾಗಣಿಕೆ ಆಗುತ್ತಿರುವುದರ ಬಗ್ಗೆವ ಖಚಿತ ಮಾಹಿತಿಯಲ್ಲಿ ಇಂದು ಅಂಗಡಿ ಮೇಲೆ ದಾಳಿ ಮಾಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯಾಧಿಕಾರಿ ಕೃಷ್ಣಮೂರ್ತಿ ಇತರರು ಇದ್ದರು.







