ಒರ್ಲಾಂಡೊ ಬಂದೂಕುಧಾರಿ ಗುಪ್ತ ಸಲಿಂಗಿಯಾಗಿದ್ದನು ಪತ್ನಿ, ಸ್ಥಳೀಯರ ಹೇಳಿಕೆ

ಒರ್ಲಾಂಡೊ (ಫ್ಲೋರಿಡ), ಜೂ. 16: ಒರ್ಲಾಂಡೊದ ಗೇ ಕ್ಲಬ್‌ನಲ್ಲಿ ರವಿವಾರ ಮುಂಜಾನೆ 49 ಮಂದಿಯನ್ನು ಹತ್ಯೆಗೈದನೆನ್ನಲಾದ ಬಂದೂಕುಧಾರಿ ಉಮರ್ ಮತೀನ್ ಗುಪ್ತ ಸಲಿಂಗಕಾಮಿಯಾಗಿದ್ದನು ಹಾಗೂ ಆತ ಸಲಿಂಗಿಗಳ ಡೇಟಿಂಗ್ ಆ್ಯಪ್‌ಗಳನ್ನು ಬಳಸುತ್ತಿದ್ದನು ಮತ್ತು ಸಲಿಂಗಿಗಳ ಬಾರ್‌ಗಳಿಗೆ ಹೋಗುತ್ತಿದ್ದನು ಎಂದು ನಗರದಲ್ಲಿರುವ ಆತನ ಸ್ನೇಹಿತರು ಮತ್ತು ಸ್ಥಳೀಯರು ಹೇಳಿದ್ದಾರೆ.
1975ರಿಂದ ನ್ಯೂಯಾರ್ಕ್ ನಗರದ ಸಲಿಂಗಿ ಸಮುದಾಯದ ವಾಸ ಸ್ಥಾನವಾಗಿರುವ ಹೊಟೇಲ್ ಹಾಗೂ ರಿಸಾರ್ಟ್ ‘ಪಾರ್ಲಿಮೆಂಟ್’ನ ಸಿಬ್ಬಂದಿಯೊಬ್ಬರು, ತನಗೆ ಒರ್ಲಾಂಡೊ ಬಂದೂಕುಧಾರಿಯ ಮುಖ ಪರಿಚಯವಿದೆ ಎಂದು ಹೇಳಿದ್ದಾರೆ.
ಆತನ ಮೊದಲ ವಿವಾಹ 2008ರಲ್ಲಿ ಸಿಫೋರಾ ಯೂಸುಫಿ ಜೊತೆಗೆ ಆಗಿತ್ತು. ಆತ ತನ್ನ ಮೇಲೆ ದೌರ್ಜನ್ಯ ನಡೆಸುತ್ತಾನೆ ಎಂದು ಆರೋಪಿಸಿ ಸಿಫೋರಾ 2011ರಲ್ಲಿ ಉಮರ್‌ಗೆ ವಿಚ್ಛೇದನ ನೀಡಿದ್ದರು.
‘‘ನಾವು ಮದುವೆಯಾದಾಗ ಆತ ತನ್ನ ಹಿಂದಿನ ಬದುಕಿನ ಬಗ್ಗೆ ನನ್ನಲ್ಲಿ ಹೇಳಿದ್ದ. ಕ್ಲಬ್‌ಗಳಿಗೆ ಹೋಗುವುದನ್ನು ಹಾಗೂ ರಾತ್ರಿಯ ಮೋಜು ಮಸ್ತಿಯನ್ನು ತಾನು ಬಹುವಾಗಿ ಇಷ್ಟಪಡುತ್ತಿದ್ದೆ ಎಂಬುದಾಗಿ ಆತ ಹೇಳಿದ್ದನು’’ ಎಂದು ಸಿಫೋರಾ ಹೇಳುತ್ತಾರೆ.
‘‘ಹಾಗಾಗಿ, ಅದು ಆತನ ಬದುಕಿನ ಒಂದು ಭಾಗವಾಗಿತ್ತು, ಆದರೆ, ಇತರರಿಗೆ ಅದು ಗೊತ್ತಾಗುವುದು ಆತನಿಗೆ ಬೇಕಿರಲಿಲ್ಲ ಎಂದು ನನಗೆ ಅನಿಸಿತು’’ ಎಂದರು.
ಕೊಲರಾಡೊದ ಬೋಲ್ಡರ್‌ನಲ್ಲಿ ಸಿಎನ್‌ಎನ್ ಸಿಫೋರಾರನ್ನು ನೇರವಾಗಿ ಪ್ರಶ್ನಿಸಿತು: ‘‘ಆತ ಸಲಿಂಗಿಯೆಂದು ನೀವು ಭಾವಿಸುತ್ತೀರಾ?’’ ಮೂರು ಸೆಕೆಂಡ್‌ಗಳ ಕಾಲ ವೌನವಾದ ಅವರು, ತಲೆಯನ್ನು ಸ್ವಲ್ಪ ಆಡಿಸಿ, ‘‘ನನಗೆ ಗೊತ್ತಿಲ್ಲ’’ ಎಂದರು.
‘‘ನಾವು ಜೊತೆಯಾಗಿದ್ದಾಗ ಆತ ಎಂದೂ ವೈಯಕ್ತಿಕವಾಗಿಯಾಗಲಿ, ದೈಹಿಕವಾಗಿಯಾಗಲಿ ಆ ಬಗ್ಗೆ ಯಾವುದೇ ಸೂಚನೆಯನ್ನು ನೀಡಿಲ್ಲ. ಆದರೆ, ಸಲಿಂಗಕಾಮದ ಬಗ್ಗೆ ಆತನಿಗೆ ತೀವ್ರ ಒಲವಿತ್ತು’’ ಎಂದು ಶಂಕಿತ ಹಂತಕನ ಮಾಜಿ ಪತ್ನಿ ಹೇಳಿದರು.
‘‘ಆತ ಸಲಿಂಗಿಯಾಗಿದ್ದಿರಬಹುದು. ಆದರೆ, ತನ್ನ ನಿಜ ಸ್ವರೂಪವನ್ನು ಆತ ಮರೆಮಾಚಲು ಬಯಸುತ್ತಿದ್ದ’’ ಎಂದರು.







