ದೇರಳಕಟ್ಟೆ: ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ರಕ್ತದಾನಿಗಳ ದಿನಾಚರಣೆ

ಕೊಣಾಜೆ, ಜೂ.16: ರಕ್ತದಾನ ಎನ್ನುವುದು ಒಂದು ಪುಣ್ಯದ ಕೆಲಸವಾಗಿದ್ದು, ರಕ್ತದಾನ ಮಾಡುವ ವಿಷಯದಲ್ಲಿ ಇಂದಿಗೂ ಹಲವರಲ್ಲಿ ತಪ್ಪುಕಲ್ಪನೆ ಬೇರೂರಿದೆ. ಇಂತಹ ಕಲ್ಪನೆಯಿಂದ ಹೊರಬಂದು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದ್ದಾರೆ.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಪೆಥಾಲಜಿ ವಿಭಾಗ ಹಾಗೂ ಕ್ಷೇಮಾ ವಿದ್ಯಾರ್ಥಿ ಕೌನ್ಸಿಲ್ ಸಹಕಾರದಲ್ಲಿ ಗುರುವಾರ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ಅಯೋಜಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಕ್ತದ ಗುಂಪುಗಳನ್ನು ವರ್ಗೀಕರಿಸಿದ ಕಾರ್ಲ್ ಲಾಂಡ್ ಸ್ಟನ್ನರ್ ಜನ್ಮ ದಿನದ ಪ್ರಯುಕ್ತ ಪ್ರತಿವರ್ಷ ಜೂ.14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ಇಂದು ರಕ್ತದ ಕೊರತೆಯಿಂದ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಯೋಜಿಸಲಾಗಿರುವ ಕಾರ್ಯಕ್ರಮ ಶ್ಲಾಘನೀಯ. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ 3,000 ವಿದ್ಯಾರ್ಥಿಗಳ ಸಹಿತ ವೈದ್ಯರು, ಸಿಬ್ಬಂದಿ ಇದ್ದು ರಕ್ತದಾನಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಭರವಸೆ ಇದೆ ಎಂದರು.
ಮನುಷ್ಯನ ಶರೀರದಲ್ಲಿ ಏಳು ಲೀಟರ್‌ನಷ್ಟು ರಕ್ತ ಇದ್ದು, 350 ಮಿ. ರಕ್ತ ತೆಗೆದರೆ ಯಾವುದೇ ಅಪಾಯ ಸಂಭವಿಸುವುದಿಲ್ಲ. ಆದರೂ ರಕ್ತ ತೆಗೆದರೆ ಶರೀರ ಕ್ಷೀಣವಾಗುವ, ಸೂಜಿ ಚುಚ್ಚುವ ಸಂದರ್ಭ ಅದರಿಂದ ರೋಗ ಬರುತ್ತದೆ, ಹೀಗೆ ವಿವಿಧ ರೀತಿಯ ತಪ್ಪುಕಲ್ಪನೆಗಳು ಜನರಲ್ಲಿವೆ. ಇಂದು ರಕ್ತದ ಕೊರತೆಯಿಂದ ಅಪಘಾತ, ಹೆರಿಗೆ ಮುಂತಾದ ಪ್ರಕರಣದಲ್ಲಿ ಮಹಿಳೆಯರು, ಮಕ್ಕಳ ಸಹಿತ ಪ್ರಾಣ ಹಾನಿಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಕ್ತದಾನ ಮಾಡಿ ಇನ್ನೊಬ್ಬರ ಪಾಲಿನ ಹೀರೊ ಆಗಿ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಯುಕ್ತ ಕಿರುಚಿತ್ರ, ಕಿರುನಾಟಕದ ಮೂಲಕ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬಳಿಕ ರಕ್ತದಾನ ಶಿಬಿರ ನಡೆಯಿತು. ಕ್ಷೇಮಾ ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಕರುಣಾ ರಮೇಶ್ ಕುಮಾರ್, ಸಾಮಾನ್ಯ ಔಷಧ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್. ಪ್ರಕಾಶ್ ಹಾಗೂ ನಿಟ್ಟೆ ವಿವಿ ಎನ್ನೆಸ್ಸೆಸ್ ಕಾರ್ಯ ನಿರ್ವಹಣಾಧಿಕಾರಿ ಡಾ.ಮುರಳೀ ಮೋಹನ್ ಚೂಂತಾರು ಉಪಸ್ಥಿತರಿದ್ದರು.
ರಕ್ತದಾನಿಗಳಾದ ಸುಶಿ ಕಣ್ಣೂರು, ಅಜಿತ್ ದೇವಾಸ್ ಜಾರ್ಜ್ ಹಾಗೂ ದೇವಿಕಾ ಕೊಲ್ಲೂರು ಅನುಭವ ಹಂಚಿಕೊಂಡರು. ವಿದ್ಯಾರ್ಥಿನಿ ಅನಿತಾ ವಂದಿಸಿದರು. ಸಂಜನಾ ಕಾರ್ಯಕ್ರಮ ನಿರೂಪಿಸಿದರು.







