ಎಲ್ಲ ಜಾತಿ ವರ್ಗಕ್ಕೆ ಪ್ರಾತಿನಿಧ್ಯ ನೀಡಿದೆ: ಕುಮಾರ್ ಬಂಗಾರಪ್ಪ
ತಾಪಂ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಸೊರಬ, ಜೂ.16: ಆಂತರಿಕ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮೀಸಲುವಾರು ಅಭ್ಯಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಎಲ್ಲ ಜಾತಿ ವರ್ಗದವರಿಗೂ ಪ್ರಾತಿನಿಧ್ಯ ನೀಡಲಾಗಿದೆ ಎಂದು ಮಾಜಿ ಸಚಿವ ಎಸ್. ಕುಮಾರ್ ಬಂಗಾರಪ್ಪಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಪಂ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಭುತ್ವಕ್ಕೆ ಹೆಚ್ಚು ಮಹತ್ವ ಇದ್ದು ಪ್ರತಿ ಚುನಾವಣೆಗಳಲ್ಲೂ ಜಾತಿ ಬೇಧವಿಲ್ಲದೆ ಎಲ್ಲ ಸಮುದಾಯದವರಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತದೆ. ಇತ್ತೀಚಿಗಿನ ಕೆಲ ತಿಂಗಳುಗಳ ಹಿಂದೆ ನಡೆದ ಜಿಪಂ ಚುನಾವಣೆಗಳಲ್ಲಿ ರಾಜ್ಯದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಸ್ಥಾನ ಬಂದಿದ್ದು ರಾಜ್ಯದಲ್ಲಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಜೆಡಿಎಸ್ ಪಕ್ಷ ಹಣದಾಸೆಗೆ ರಾಜ್ಯ ರಾಜಕಾರಣವನ್ನೇ ಹಾಳುಮಾಡಿದೆ. ಇತ್ತೀಚಿನ ಕೆಲದಿನಗಳ ಹಿಂದೆ ನಡೆದ ರಾಜ್ಯ ಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಕೋಮುವಾದಿ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಯಾವುದಕ್ಕೂ ಸೈ ಎಂಬಂತೆ ಹೊಂದಾಣಿಕೆ ರಾಜಕಾರಣಕ್ಕೆ ಮುಂದಾಗುತ್ತಿದೆ ಎಂದು ಆರೋಪಿಸಿದರು.
ಸೊರಬ ಬ್ಲಾಕ್ ಅಧ್ಯಕ್ಷರ ಪತ್ನಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಮಾಧ್ಯಮದವರು ಜಿಲ್ಲಾ ಅಧ್ಯಕ್ಷ ತೀ.ನಾ.ಶ್ರೀನಿವಾಸರವರನ್ನು ಪ್ರಶ್ನಿಸಿದಾಗ, ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಹುದ್ದೆಯಲ್ಲಿ ಇದ್ದುಕೊಂಡು, ಪಕ್ಷ ಘೋಷಿಸಿದ ಅಧಿಕೃತ ಅಭ್ಯರ್ಥಿಗಳ ಪರ ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಿ, ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಮುಂದಾಗಬೇಕು. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಮಾಹಿತಿ ಪಡೆದು, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅರಣ್ಯ ಹಕ್ಕು ಸಮಿತಿ ಕಾಯ್ದೆಯಡಿಯಲ್ಲಿ ಅರ್ಜಿಗಳ ವಿಲೇವಾರಿಯಲ್ಲಿ ಸೊರಬ ಶಾಸಕರು ವಿಫಲವಾಗಿದ್ದಾರೆ. ತಾಲೂಕಿನ ಜನತೆ ಪ್ರಬುದ್ಧರಾಗಿದ್ದು, ಎಲ್ಲ್ಲ ಆಗು ಹೋಗುಗಳನ್ನು ಗಮನಿಸಿದ್ದಾರೆ. ಈ ಬಾರಿ ತಾಪಂ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ಹಾಗೂ ವಿವಿಧ ಯೋಜನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್‌ಗೆ ಮತ ಹಾಕುವುದರ ಮೂಲಕ ಕೈ ಹಿಡಿಯಲಿದ್ದಾರೆ ಎಂದರು. ತಾಪಂ ಚುನಾವಣೆಯು ಕುಮಾರ್ ಬಂಗಾರಪ್ಪನವರ ನೇತೃತ್ವದಲ್ಲಿ ನಡೆಯುತ್ತಿದ್ದು, ಕ್ಷೇತ್ರದ ಜನತೆಯ ಅಭಿಲಾಷೆಯಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಕಣಕ್ಕೆ ಇಳಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮೇಗೌಡ, ಸೇವಾದಳದ ಅಧ್ಯಕ್ಷ ವೈ.ಎಚ್.ನಾಗರಾಜ, ಪ್ರ.ಕಾರ್ಯದರ್ಶಿ ತಬಲಿ ಬಂಗಾರಪ್ಪ, ಮುಹಮ್ಮದ್ ಖಾಸಿಂ, ಇಕ್ಕೇರಿ ರಮೇಶ್, ಜೋಸೆಫ್, ಧರ್ಮಪ್ಪ, ಎಂ.ಡಿ.ಉಮೇಶ್, ಸತೀಶ್ ಹೆಗಡೆ, ಚೌಟಿ ಚಂದ್ರಣ್ಣ, ಫಕ್ಕೀರಪ್ಪ ಮಾಕೊಪ್ಪ, ಹಿರಿಯಣ್ಣ ಕಲ್ಲಂಬಿ, ಮೆಹಬೂಬ್ ಅಲಿ ಮತ್ತಿತರರು ಹಾಜರಿದ್ದರು.







