ಅಕ್ರಮ ಮದ್ಯದಂಗಡಿ ತೆರವಿಗೆ ಗ್ರಾಮಸ್ಥರ ಮನವಿ

ಕಡೂರು ಜೂ. 16: ತಾಲೂಕಿನ ಕುಪ್ಪಾಳು ಗ್ರಾಮದಲ್ಲಿ ಕಾನೂನು ಬಾಹಿರ ವಾಗಿ ನಡೆಸುತ್ತಿರುವ ಮದ್ಯದಂಗಡಿ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲು ಆಗ್ರಹಿಸಿ ಕುಪ್ಪಾಳು ಗ್ರಾಮಸ್ಥರು ತಹಶೀಲ್ದಾರ್ ಎಂ.ಭಾಗ್ಯಾ ರವರಿಗೆ ಮನವಿ ಸಲ್ಲಿಸಿದರು.
ತಾಲೂಕು ಕಚೇರಿಗೆ ಆಗಮಿಸಿದ ಗ್ರಾಮಸ್ಥರು ಕುಪ್ಪಾಳು ಗ್ರಾಮದ ಸ.ನಂ. 110/6 ಕೃಷಿ ಭೂಮಿ ಯಾಗಿದೆ. ಅದರಲ್ಲಿ ಈ ಹಿಂದೆ 30x40 ವಿಸ್ತೀರ್ಣದ ಜಾಗವನ್ನು ಪಿಡಿಒ ವಾಸದ ಉದ್ದೇಶಕ್ಕಾಗಿ ಪರವಾನಿಗೆ ನೀಡಿದ್ದರು. ಪಿಡಿಒ ಮದ್ಯದಂಗಡಿ ಮಾಲಕರಿಗೆ ನಿರಾಕ್ಷೇಪನಾ ಪ್ರಮಾಣಪತ್ರ ಹಾಗೂ ಪರವಾನಿಗೆ ನೀಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆದ್ದರಿಂದ ಈ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರಗಿಸುವ ಜೊತೆಗೆ ಮದ್ಯದಂಗಡಿ ನಡೆಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎಂ.ಭಾಗ್ಯಾ, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು, ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ, ಗ್ರಾಮಸ್ಥರಾದ ಪರಮೇಶ್ವರಪ್ಪ, ಗಂಗಾಧರಪ್ಪ, ಮೂರ್ತಪ್ಪ, ನಟರಾಜ್, ಕೆ.ಪಿ. ಶರತ್, ಕುಬೇರಪ್ಪ, ಮಂಜಪ್ಪ, ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.







