ಸಮಾಜದಲ್ಲಿ ಬದುಕಲು ಶಿಕ್ಷಣ ಅಗತ್ಯ: ನ್ಯಾ. ಅನಿತಾ
ಜನಜಾಗೃತಿ ಜಾಥಾ ಕಾರ್ಯಕ್ರಮ

ಕಡೂರು, ಜೂ.16: ಸಮಾಜದಲ್ಲಿ ಬದುಕಲು ಶಿಕ್ಷಣ ಅಗತ್ಯ. ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಅನಿತಾ ತಿಳಿಸಿದರು.
ಅವರು ಪಟ್ಟಣದ ಲಯನ್ಸ್ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಬಾಲ ಕಾರ್ಮಿಕ ಯೋಜನೆ ಸೊಸೈಟಿ ಹಾಗೂ ಇತರೇ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜನಜಾಗೃತಿ ಜಾಥಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುತ್ತಿವೆ. ಸರಕಾರ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಸೇರಿಸಿಕೊಳ್ಳಲು ‘ಮಕ್ಕಳ ನಡೆ ಶಾಲೆಯ ಕಡೆ’ ಎಂಬ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಂಡಿದೆ ಎಂದರು.
ಇತ್ತೀಚೆಗಿನ ದಿನಗಳಲ್ಲಿ ಮಕ್ಕಳನ್ನು ಕೂಲಿಗೆ ಕಳುಹಿಸುವ ಪ್ರವೃತ್ತಿ ಕಡಿಮೆಯಾಗಿದ್ದರೂ ಬಾಲ ಕಾರ್ಮಿಕರ ಪದ್ಧತಿ ಇನ್ನೂ ಕೆಲವೆಡೆ ಜಾರಿಯಲ್ಲಿದೆ. ಮಕ್ಕಳ ಹಿತದೃಷ್ಟಿಯಿಂದ ಬಾಲ ಕಾರ್ಮಿಕರ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಕರೆ ನೀಡಿದರು.
ಕಾರ್ಮಿಕ ಇಲಾಖೆ ತಾಲೂಕು ಅಧಿಕಾರಿ ಶಶಿಕಲಾ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಪಿಡುಗಾಗಿ ಕಾಡುತ್ತಿದೆ. ಇದರ ವಿರುದ್ಧ ಅನೇಕ ಕಾನೂನುಗಳು ಜಾರಿಯಲ್ಲಿದ್ದರೂ ಇದನ್ನು ತಪ್ಪಿಸಲು ಸಾಧ್ಯವಾಗದೆ ಇರುವುದು ವಿಷಾದನೀಯ. ಕೆಲವು ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುತ್ತಿವೆ. ಅಂತಹವರ ಪುನರ್ವಸತಿಗೆ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಕೀಲ ಕೆ.ಎನ್. ಬೊಮ್ಮಣ್ಣ ಬಾಲ ಕಾರ್ಮಿಕರ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಕಾರ್ಯದರ್ಶಿ ಸೂರಿ ಶ್ರೀನಿವಾಸ್ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹುಲ್ಲೇಹಳ್ಳಿ ರಾಜಶೇಖರ್, ಜಿಲ್ಲಾ ಕಾರ್ಮಿಕ ಉಪ ಆಯುಕ್ತ ಯತಿರಾಜ್, ಇಲಾಖೆಯ ರುದ್ರೇಶ್, ಮಂಜುನಾಥ್, ಆಸರೆ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್, ನೇತ್ರಾವತಿ, ಕಲ್ಪನಾ ಮತ್ತಿತರರು ಉಪಸ್ಥಿತರಿದ್ದರು.







