ಪಾರದರ್ಶಕ ಆಡಳಿತಕ್ಕೆ ಪ್ರಾಮಾಣಿಕತೆ ಅಗತ್ಯ:
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಮೇಶ್ ಅಧಿಕಾರ ಸ್ವೀಕಾರ

ಚಿಕ್ಕಮಗಳೂರು, ಜೂ.16: ಜನಸೇವೆಗಾಗಿ ನಮಗೆ ಸಿಕ್ಕ ಅವಕಾಶ ವನ್ನು ಸದ್ಬಳಕೆ ಮಾಡಿಕೊಂಡು ಆತ್ಮ ತೃಪ್ತಿಗಾಗಿ ಪಾರದರ್ಶಕ ಆಡಳಿತದ ಮೂಲಕ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ತಾಪಂ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ತಿಳಿಸಿದ್ದಾರೆ. ಅವರು ನಗರದ ತಾಪಂ ಕಚೇರಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಿದ್ದಾಪುರ ರಮೇಶ್‌ರವರ ಅಭಿನಂದನ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನರು ತಮ್ಮ ಹಲವು ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಂಬ ಭರವಸೆ ಹೊತ್ತು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಮ್ಮನ್ನು ನಂಬಿದ ಜನರ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದಾಗ ರಾಜಕೀಯ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದರು.
ತಾಪಂಗೆ ಸಂಬಂಧಿಸಿದ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡುವ ಮುನ್ನ್ನ ಸ್ಥಾಯಿ ಸಮಿತಿ ಮುಂದೆ ಬರುತ್ತದೆ. ಅಕ್ಷರ ದಾಸೋಹ, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ ಸೇರಿದಂತೆ ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿನ ಅಭಿವೃದ್ಧಿ ಹಾಗೂ ಆಹಾರ ಧಾನ್ಯಗಳ ವಿತರಣೆ ಮತ್ತು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕುರಿತಂತೆ ದಾಖಲಾತಿ ಗಳನ್ನು ಸರಿಯಾಗಿ ಪರಿಶೀಲಿಸಿ ಪಾರದರ್ಶಕವಾದ ಕೆಲಸ ಮಾಡಿದಾಗ ಜನರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ರಮೇಶ್ ಮಾತನಾಡಿ, ಅಧ್ಯಕ್ಷರ ಮತ್ತು ಸದಸ್ಯರ ಸಲಹೆ ಸಹಕಾರ ಪಡೆದು ಗ್ರಾಮೀಣ ಜನರ ಸಮಸ್ಯೆಗೆ ಒಗ್ಗಟ್ಟಾಗಿ ಸ್ಪಂದಿಸಿ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸೋಣ ಎಂದರು.
ಉಪಾಧ್ಯಕ್ಷ ವೈ.ಜಿ.ಸುರೇಶ್ ಮಾತನಾಡಿದರು. ಜಿಪಂ ಸದಸ್ಯೆ ಕವಿತಾ ರೇವಣ್ಣ, ತಾಪಂ ಸದಸ್ಯರಾದ ರೇಖಾಅನಿಲ್, ಶುಭಾಸತ್ಯಮೂರ್ತಿ, ದೀಪಾನಾಗೇಶ್, ಕರ್ತಿಕೆರೆ ಜಯಣ್ಣ, ಅರ್ಪಿತಾಪ್ರದೀಪ್, ರಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







