ರೈಲ್ವೆ ಟಾಯ್ಲೆಟ್ ವಿನ್ಯಾಸಕ್ಕೆ ಮಣಿಪಾಲ ವಿದ್ಯಾರ್ಥಿಗೆ ಪ್ರಶಸ್ತಿ

ಮಣಿಪಾಲ, ಜೂ.16: ಲಕ್ನೋದ ಸಂಶೋಧನೆ, ವಿನ್ಯಾಸ ಹಾಗೂ ಗುಣಮಟ್ಟ ಸಂಘಟನೆ (ಆರ್‌ಡಿಎಸ್‌ಓ) ನಡೆಸಿದ ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ಮಣಿಪಾಲ ವಿವಿಯ ಆರ್ಕಿಟೆಕ್ಟ್ ವಿದ್ಯಾರ್ಥಿ ವಿನೋದ್ ಅಂತೋನಿ ಥಾಮಸ್ ಅವರ ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ದ್ವಿತೀಯ ಬಹುಮಾನ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಕ್ಲೀನ್ ಇಂಡಿಯಾ’ ಅಭಿಯಾನದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು, ತನ್ನ ರೈಲುಗಳಲ್ಲಿ ನೀರು ರಹಿತ ಹಾಗೂ ವಾಸನಾರಹಿತ ಶೌಚಾಲಯ ಅಳವಡಿಕೆಗಾಗಿ ಅಖಿಲ ಬಾರತ ಮಟ್ಟದಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಅಳವಡಿಕೆ ಹಾಗೂ ನಿರ್ವಹಣೆ ಸಾದ್ಯತೆಯ ವಿನ್ಯಾಸವನ್ನು ಆಹ್ವಾನಿಸಲಾಗಿತ್ತು.
ಸ್ಪರ್ಧೆಗಾಗಿ ಬಂದ ವಿನ್ಯಾಸಗಳಲ್ಲಿ ಹತ್ತು ವಿನ್ಯಾಸಗಳನ್ನು ರೈಲ್ವೆ, ಉದ್ದಿಮೆ ಹಾಗೂ ಸಂಶೋಧನಾ ಕ್ಷೇತ್ರದ ತಜ್ಞರನ್ನೊಳಗೊಂಡ ಆಯ್ಕೆ ಸಮಿತಿ ಅಂತಿಮ ಸುತ್ತಿಗೆ ಆಯ್ಕೆ ಮಾಡಿದ್ದು, ಇದರಲ್ಲಿ ಮಣಿಪಾಲದ ವಿನೋದ್ ಅವರ ವಿನ್ಯಾಸವನ್ನು ಎರಡನೇ ಅತ್ಯುತ್ತಮವೆಂದು 75,000ರೂ. ನಗದು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು.
ಇವರೊಂದಿಗೆ ಮತ್ತೊಬ್ಬ ವಿನ್ಯಾಸಕಾರ ರಾಹುಲ್ ಗಾರ್ಗ್ ಹಾಗೂ ಸೌರಭ ಹನ್ಸ್ ಅವರಿಗೂ ಎರಡನೇ ಬಹುಮಾನ ನೀಡಲಾಗಿದೆ.
ವಿನೋದ್ ಥಾಮಸ್ ಮಣಿಪಾಲ ಆರ್ಕಿಟೆಕ್ಟ್‌ನಲ್ಲಿ 10ನೆ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದು, ತಾನು ವಿನ್ಯಾಸಗೊಳಿಸಿದ ಶೌಚಾಲಯದಲ್ಲಿ ಈಗ ರೈಲುಗಳಲ್ಲಿರುವ ಟಾಯ್ಲೆಟ್‌ಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದಾರೆ. ಇದರಲ್ಲಿ ಮಲ-ಮೂತ್ರ, ತ್ಯಾಜ್ಯಗಳ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.





