ಜೂ.27ಕ್ಕೆ ರೈತರಿಂದ 13 ಜಿಲ್ಲೆಗಳ ಬಂದ್
ಕೇಂದ್ರದ ಹೊಸ ಆಮದು-ರಫ್ತು ನೀತಿಗೆ ಖಂಡನೆ
ಬೆಂಗಳೂರು, ಜೂ.16: ಕೇಂದ್ರ ಸರಕಾರದ ಆಮದು-ರಫ್ತು ನೀತಿ ಖಂಡಿಸಿ ಜೂ.27ರಂದು ರಾಜ್ಯದಲ್ಲಿ ಪ್ರಮುಖವಾಗಿ ಅಡಿಕೆ ಮತ್ತು ತೆಂಗು ಬೆಳೆಯುವ 13 ಜಿಲ್ಲೆಗಳಲ್ಲಿ ರೈತರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.
ಗುರುವಾರ ಇಲ್ಲಿನ ಗಾಂಧಿನಗರದಲ್ಲಿರುವ ಸೇನೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜೂ.27ರಂದು ಹಾವೇರಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಪ್ರಮುಖವಾಗಿ ಅಡಿಕೆ ಮತ್ತು ತೆಂಗು ಬೆಳೆಯುವ ಪ್ರದೇಶಗಳ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನು ಬಂದ್ ಮಾಡಲಾಗುವುದೆಂದು ಹೇಳಿದರು.
ಅಂದು ಹೆದ್ದಾರಿ ತಡೆ, ನಗರಗಳ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಳೆದ ಸಾಲಿನಲ್ಲಿ ಅಡಿಕೆ ಬೆಲೆ ಹೆಚ್ಚಾಗಿತ್ತು. ಆದರೆ, ಇದೀಗ ಕೇಂದ್ರ ಸರಕಾರದ ಆಮದು ನೀತಿಯಿಂದ ಅಡಿಕೆ ಬೆಲೆ ಸಾಕಷ್ಟು ಕುಸಿದಿದೆ. ಅಲ್ಲದೆ, ಇಂತಹ ದುರಂತ ನಡೆದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಬೆಳೆಗಾರರಿಗೆ ಯಾವುದೇ ಪರಿಹಾರ ನೀಡಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ಹೊರ ದೇಶಗಳಿಂದ ಅಡಿಕೆ ಮತ್ತು ತೆಂಗು ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶದ ಉತ್ಪಾದನೆಗೆ ತೀವ್ರ ಹಿನ್ನಡೆಯಾಗಿದೆ ಎಂದ ಅವರು, ಕಳೆದ ಬಾರಿ ತೊಗರಿಬೇಳೆ ಕ್ವಿಂಟಾಲ್‌ಗೆ 4ರಿಂದ5 ಸಾವಿರ ರೂ.ಗಳಿಗೆ ರೈತರಿಂದ ಖರೀದಿಸಿ, ಚಿಲ್ಲರೆ ಮಾರುಕಟ್ಟೆಯಲ್ಲಿ 160 ರಿಂದ 180 ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಇಂತಹ ವ್ಯವಸ್ಥೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದಲ್ಲದೆ, ರೈತರಿಗೆ ನಷ್ಟ ಉಂಟು ಮಾಡುತ್ತಿದೆ ಎಂದು ದೂರಿದರು.
ಕೇಂದ್ರ ಸರಕಾರವು ಕರ್ನಾಟಕ ರಾಜ್ಯದ ರೈತರಿಗೆ ತೆಂಗು ಮತ್ತು ಅಡಿಕೆ ಬೆಳೆಯಲ್ಲಿ ಆಗಿರುವ ನಷ್ಟ ತುಂಬಿಕೊಡಲು ಮುಂದಾಗಬೇಕೆಂದು ರಾಜ್ಯ ಸರಕಾರ ಇನ್ನು ಮುಂದಾದರೂ ಕೇಂದ್ರಕ್ಕೆ ಒತ್ತಾಯಿಸಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಲಕ್ಷ್ಮಣಸ್ವಾಮಿ, ಕೆಂಚೇಗೌಡ ಸೇರಿ ಪ್ರಮುಖರು ಹಾಜರಿದ್ದರು.





