ಮುಕ್ತಾಯದ ಹಂತ ತಲುಪಿದ ಸಿಐಡಿ ತನಿಖೆ?
ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ
ಬೆಂಗಳೂರು, ಜೂ. 16: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ನಡೆಸುತ್ತಿರುವ ಗಂಭೀರ ತನಿಖೆ ಇದೀಗ ಮುಕ್ತಾಯದ ಹಂತಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.
ಸದ್ಯದಲ್ಲೇ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್‌ಸೀಟಿ ಸಲ್ಲಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಕೈವಾಡವಿಲ್ಲ ಎನ್ನಲಾಗಿದೆ.
ಇನ್ನು ಮೂರು ಬಾರಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಯನ್ನು ಹಾವೇರಿ ಜಿಲ್ಲೆಯ ಹಾನಗಲ್ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕನಾದ ಸಂತೋಷ್ ಪರಶುರಾಮ್ ಅಗಸಿ ಮಣಿ ಸೋರಿಕೆ ಮಾಡಿದ್ದ ಎಂದು ಕೆಲ ಮೂಲಗಳು ಹೇಳಿವೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ರೂವಾರಿಗಳು ಶಿವಕುಮಾರಯ್ಯ ಹಾಗೂ ಕುಮಾರಸ್ವಾಮಿ ಯಾನೆ ಕಿರಣ್ ಎಂಬುದು ಖಚಿತಪಡಿಸಲಾಗಿದ್ದು, ಇವರು ಗುಂಪು ಮಾಡಿಕೊಂಡು ಸೋರಿಕೆಯಲ್ಲಿ ಪಾತ್ರವಹಿಸಿದ್ದರು ಎನ್ನಲಾಗಿದ್ದು, ಒಟ್ಟಾರೆ ಈ ಸಂಬಂಧ ತನಿಖೆ ಕೊನೆ ಹಂತ ತಲುಪಿದೆ ಎಂದು ಸಿಐಡಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.





