ಚಾಂಪಿಯನ್ಸ್ ಟ್ರೋಫಿ: ಭಾರತಕ್ಕೆ ಸೋಲು
ಲಂಡನ್, ಜೂ.16: ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯದ ವಿರುದ್ಧ 2-4 ಗೋಲುಗಳ ಅಂತರದಿಂದ ಸೋಲುವ ಮೂಲಕ ಪ್ರಶಸ್ತಿ ಸುತ್ತಿಗೇರುವ ವಿಶ್ವಾಸಕ್ಕೆ ಧಕ್ಕೆ ಮಾಡಿಕೊಂಡಿದೆ.
ಗುರುವಾರ ಇಲ್ಲಿ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತ ತಂಡದ ಪರ ವಿ.ಆರ್. ರಘುನಾಥ್ ಹಾಗೂ ಮನ್‌ದೀಪ್ ಪೆನಾಲ್ಟಿ ಕಾರ್ನರ್‌ನ ಮೂಲಕ ತಲಾ ಒಂದು ಗೋಲು ಬಾರಿಸಿದರು.
ಆಸ್ಟ್ರೇಲಿಯ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿತು. ಭಾರತ ಅಂತಿಮ ಕ್ಷಣದಲ್ಲಿ ಮರು ಹೋರಾಟ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಟ್ರೇಲಿಯ ತಂಡ 14ನೆ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸುವ ವಿಶ್ವಾಸದಲ್ಲಿದ್ದು, ಒಟ್ಟು 13 ಅಂಕವನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಭಾರತ 2ನೆ ಸ್ಥಾನದಲ್ಲಿದೆ. ಭಾರತ ತಂಡ ಮುಂದಿನ ಸುತ್ತಿಗೇರಬೇಕಾದರೆ ಗ್ರೇಟ್ ಬ್ರಿಟನ್ ಹಾಗೂ ಬೆಲ್ಜಿಯಂ ನಡುವಿನ ಪಂದ್ಯದ ಫಲಿತಾಂಶವನ್ನು ಕಾಯಬೇಕಾಗಿದೆ.
Next Story





