ಯೆನೆಪೊಯ ವಿವಿ-ನಾರಾಯಣ ಆಸ್ಪತ್ರೆ ನಡುವೆ ಒಪ್ಪಂದ

ಮಂಗಳೂರು, ಜೂ.16: ಯೆನೆಪೊಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್ ಹಾಗೂ ನೆಲ್ಲೂರಿನ ನಾರಾಯಣ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ನಾರಾಯಣ ನರ್ಸಿಂಗ್ ಕಾಲೇಜು ನಡುವೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಗುರುವಾರ ಸಹಿ ಮಾಡಲಾಯಿತು.
ನಾರಾಯಣ ಸಂಸ್ಥೆಯಲ್ಲಿ ಎಥಿಕ್ಸ್ ಸೆಂಟರ್ ಸ್ಥಾಪಿಸಲು, ಅಲ್ಲಿಯ ಸಿಬ್ಬಂದಿ ವರ್ಗಕ್ಕೆ ತರಬೇತಿ, ಸಂಶೋಧನೆ ಮತ್ತು ಪಬ್ಲಿಕೇಶನ್ ಹಾಗೂ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲು ಯೆನೆಪೊಯ ವಿಶ್ವವಿದ್ಯಾನಿಲಯವು ಸಲಹೆ ಹಾಗೂ ಸಹ ಕಾರವನ್ನು ನೀಡುವುದು ಈ ಒಡಂಬ ಡಿಕೆಯ ಮುಖ್ಯ ಉದ್ದೇಶವಾಗಿದೆ.
ಯೆನೆಪೊಯ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಎಥಿಕ್ಸ್ ಫೆಬ್ರವರಿ 2011ರಲ್ಲಿ ಸ್ಥಾಪನೆಗೊಂಡಿದೆ. ಎಥಿಕ್ಸ್ ಶಿಕ್ಷಣದ ವಿಷಯದಲ್ಲಿ ಸಂಶೋಧನೆ ಮತ್ತು ವಿವಿಧ ಶೈಕ್ಷಣಿಕ ಚಟುವಟಿಕೆಯಲ್ಲಿ ಕಾರ್ಯನಿರತವಾಗಿದ್ದು, ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಮೊಟ್ಟ ಮೊದಲ ಎಥಿಕ್ಸ್ ಕೇಂದ್ರ ಎಂದು ಹೆಗ್ಗಳಿಕೆ ಪಡೆದಿದೆ. ವೈದ್ಯಕೀಯ ರಂಗದಲ್ಲಿ ಮೆಡಿಕಲ್ ಎಥಿಕ್ಸ್ ಮತ್ತು ಬಯೋ ಎಥಿಕ್ಸ್ ವಿಷಯಗಳನ್ನು ಅಳವಡಿಸಿ ಶೈಕ್ಷಣಿಕ ಕಾರ್ಯಕ್ರಮವನ್ನು, ಸಂಶೋಧನೆ ಮತ್ತು ಸಾಂಸ್ಕೃತಿಕ ವಿನಿಮಯ ಮಾಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸ ಲಾಗಿದೆ. ನಾರಾಯಣ ಡೆಂಟಲ್ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ಮಾಕ್ಸಿಲೋ ಫೇಶಿಯಲ್ ಇಮೇಜಿಯೋಲೊಜಿಯ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥ ಡಾ. ಕಣ್ಣನ್, ಯೆನೆಪೊಯ ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್, ಡಾ. ಸಿ.ವಿ.ರಘವೀರ್, ಸೆಂಟರ್ ಫಾರ್ ಎಥಿಕ್ಸ್‌ನ ನಿರ್ದೇಶಕಿ ಡಾ. ವೀಣಾ ವಾಸ್ವಾನಿ ಒಡಂಬಡಿಕೆಗೆ ಸಹಿ ಮಾಡಿದರು.
ಯೆನೆಪೊಯ ವಿಶ್ವವಿದ್ಯಾನಿಲಯದ ಅಡಿಶನಲ್ ರಿಜಿಸ್ಟ್ರಾರ್ ಡಾ. ಶ್ರೀಕುಮಾರ್ ನಾಯರ್, ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊಫೆಸರ್ ಅಬ್ದುರ್ರಹ್ಮಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







