ಪಠಾಣ್‌ಕೋಟ್ ದಾಳಿ ಸೂತ್ರಧಾರಿ ಪಾಕ್‌ನಿಂದ ಅಫ್ಘಾನ್‌ಗೆ ಪರಾರಿ?
ಲಾಹೋರ್, ಜೂ. 16: ಪಠಾಣ್‌ಕೋಟ್ ವಾಯು ನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ವೇಳೆ ಭಯೋತ್ಪಾದಕರಿಗೆ ಫೋನ್‌ನಲ್ಲಿ ಸೂಚನೆಗಳನ್ನು ನೀಡಿದ್ದ ಜೈಶೆ ಮುಹಮ್ಮದ್ ನಾಯಕನೊಬ್ಬನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಪಲಾಯನಗೈಯುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.
‘‘ಜನವರಿ 2ರಂದು ವಾಯು ನೆಲೆಯ ಮೇಲೆ ದಾಳಿ ನಡೆಸುವ ಮೊದಲು ಪಠಾಣ್‌ಕೋಟ್‌ನಲ್ಲಿದ್ದ ಭಯೋತ್ಪಾದಕರೊಂದಿಗೆ 25ಕ್ಕೂ ಅಧಿಕ ಬಾರಿ ಟೆಲಿಫೋನ್ ಮೂಲಕ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಅಫ್ಘಾನ್‌ಗೆ ಗಡಿದಾಟಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ’’ ಎಂದು ದಾಳಿಯ ಬಗ್ಗೆ ತನಿಖೆ ನಡೆಸುತ್ತಿರುವ ಜಂಟಿ ತನಿಖಾ ತಂಡದ ಸದಸ್ಯರೊಬ್ಬರು ಇಂದು ಪಿಟಿಐಗೆ ಹೇಳಿದರು.
ಪಠಾಣ್‌ಕೋಟ್ ದಾಳಿಯ ವೇಳೆ ಆತ ಪಾಕಿಸ್ತಾನ ಬುಡಕಟ್ಟು ಪ್ರದೇಶವೊಂದರಲ್ಲಿ ಇದ್ದ ಎಂದರು. ‘‘ಕಾನೂನು ಅನುಷ್ಠಾನ ಸಂಸ್ಥೆಗಳು ಬುಡಕಟ್ಟು ಪ್ರದೇಶದಲ್ಲಿ ಆತನನ್ನು ಹುಡುಕಲು ಪ್ರಯತ್ನಿಸಿದವು. ಆದರೆ, ಆತ ಅಫ್ಘಾನಿಸ್ತಾನಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ’’ ಎಂದು ಅಧಿಕಾರಿ ತಿಳಿಸಿದರು. ಆದರೆ, ಜೆಇಎಂ ಭಯೋತ್ಪಾದಕನ ಗುರುತನ್ನು ಅವರು ಬಹಿರಂಗಪಡಿಸಲಿಲ್ಲ.
ಅದೂ ಅಲ್ಲದೆ, ಪಠಾಣ್‌ಕೋಟ್ ನೆಲೆಯ ಮೇಲೆ ನಡೆದ ದಾಳಿಯ ಸೂತ್ರಧಾರಿ ಕೆಲವು ಸಮಯದ ಹಿಂದೆ ಸಂಘಟನೆಯನ್ನು ತೊರೆದಿದ್ದಾನೆ ಎಂದು ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ವಿಚಾರಣೆಯ ವೇಳೆ ಹೇಳಿಕೊಂಡಿದ್ದಾನೆ. ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸಿ ಪಠಾಣ್‌ಕೋಟ್ ದಾಳಿಯ ನೈಜ ಸಂಗತಿಗಳನ್ನು ಹೊರತರುವಂತೆ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ತನಿಖಾ ಸಂಸ್ಥೆಗಳ ಮೇಲೆ ಅಗಾಧ ಒತ್ತಡ ಹೇರಿದ್ದಾರೆ ಎಂದು ತನಿಖಾ ತಂಡದ ಸದಸ್ಯ ತಿಳಿಸಿದರು.







