ಶ್ವೇತಭವನದಲ್ಲಿ ಒಬಾಮ-ದಲಾಯಿ ಲಾಮಾ ಭೇಟಿ

ವಾಶಿಂಗ್ಟನ್, ಜೂ. 16: ಚೀನಾದ ಎಚ್ಚರಿಕೆಯ ಹೊರತಾಗಿಯೂ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬುಧವಾರ ಶ್ವೇತಭವನದಲ್ಲಿ ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರನ್ನು ಭೇಟಿಯಾದರು.
ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಒಬಾಮ ಶ್ವೇತಭವನದಲ್ಲಿ ದಲಾಯಿ ಲಾಮಾರನ್ನು ಭೇಟಿಯಾಗುತ್ತಿರುವುದು ಇದು ನಾಲ್ಕನೆ ಬಾರಿಯಾಗಿದೆ.
ಸಾಮಾನ್ಯವಾಗಿ ಒಬಾಮ ವಿಶ್ವ ನಾಯಕರನ್ನು ಶ್ವೇತಭವನದ ಓವಲ್ ಕಚೇರಿಯಲ್ಲಿ ಭೇಟಿಯಾಗುತ್ತಾರೆ. ಆದರೆ, ಈ ಬಾರಿ ಒಬಾಮ, ಲಾಮಾರನ್ನು ಶ್ವೇತಭವನದ ನಿವಾಸದಲ್ಲಿ ಭೇಟಿಯಾದರು.
ಇದು ಖಾಸಗಿ ಭೇಟಿಯೆನ್ನುವುದನ್ನು ಸೂಚಿಸುತ್ತದೆ ಎಂದು ಶ್ವೇತಭವನದ ವಕ್ತಾರ ಜೋಶ್ ಅರ್ನೆಸ್ಟ್ ತಿಳಿಸಿದರು.
ಟಿಬೆಟನ್ನು ಚೀನಾದ ಭಾಗವಾಗಿ ಪರಿಗಣಿಸುವ ಅಮೆರಿಕದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸಿದರು.
ಅಮೆರಿಕದ ಭರವಸೆಯ ಉಲ್ಲಂಘನೆ: ಚೀನಾ
ಬೀಜಿಂಗ್, ಜೂ. 16: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರನ್ನು ಭೇಟಿಯಾಗಿರುವುದು, ಟಿಬೆಟ್‌ನ ಸ್ವಾತಂತ್ರವನ್ನು ಬೆಂಬಲಿಸದಿರುವ ಅಮೆರಿಕದ ಭರವಸೆಯನ್ನು ಉಲ್ಲಂಘಿಸಿದೆ ಎಂದು ಚೀನಾ ಇಂದು ಹೇಳಿದೆ ಹಾಗೂ ಇದು ದ್ವಿಪಕ್ಷೀಯ ಸಹಕಾರದ ಮೇಲೆ ಪರಿಣಾಮ ಬೀರಲಿದೆ ಎಂದು ಅದು ಎಚ್ಚರಿಸಿದೆ.
‘‘ಟಿಬೆಟ್‌ನ ವ್ಯವಹಾರಗಳು ಚೀನಾದ ಆಂತರಿಕ ವ್ಯವಹಾರಗಳಾಗಿವೆ ಹಾಗೂ ಇದರಲ್ಲಿ ಹಸ್ತಕ್ಷೇಪ ನಡೆಸಲು ಯಾವುದೇ ಅನ್ಯ ದೇಶಕ್ಕೆ ಅಧಿಕಾರವಿಲ್ಲ’’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದರು.







