ಮಹಿಳಾ ಪ್ರವಾಸಿಗರಿಗೆ ರಕ್ಷಣೆ ನೀಡಿ: ಸಚಿವ ದೇಶಪಾಂಡೆ
ಪ್ರವಾಸಿ ಮಾರ್ಗದರ್ಶಿಗಳು ಪರವಾನಿಗೆ, ಪ್ರಮಾಣ ಪತ್ರ ವಿತರಣೆ

ಬೆಂಗಳೂರು, ಜೂ.16: ಹೊರ ಪ್ರದೇಶದಿಂದ ಬರುವ ಮಹಿಳಾ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡುವ ಜೊತೆಗೆ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದ್ದ, ತರಬೇತಿ ಪಡೆದ ಪ್ರವಾಸಿ ಮಾರ್ಗದರ್ಶಿಗಳು ಮತ್ತು ಪ್ರವಾಸಿ ಮಿತ್ರರಿಗೆ ಪರವಾನಿಗೆ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರವಾಸೋದ್ಯಮವು ಸರಕಾರಗಳ ಖಜಾನೆ ತುಂಬಿಸುವ ಪ್ರಮುಖ ಇಲಾಖೆಯಾಗಿದ್ದು, ಇಲ್ಲಿ ಅನೇಕ ಆದಾಯದ ಮೂಲಗಳಿವೆ. ಹೀಗಾಗಿ, ಪ್ರವಾಸಿಗಳ ರಕ್ಷಣೆಗೆ ಮೊದಲ ಆದ್ಯತೆ ನೀಡುವ ಜೊತೆಗೆ ಪ್ರವಾಸಿ ತಾಣಗಳ ಸ್ವಚ್ಛತೆ ಕಾಪಾಡುವುದು, ಪ್ರವಾಸಿಗಳೊಂದಿಗೆ ಉತ್ತಮವಾಗಿ ಸಂವಹನ ಮಾಡುವುದು, ಅಗತ್ಯ ಮಾಹಿತಿ ನೀಡುವುದು ಪ್ರವಾಸಿ ಮಾರ್ಗದರ್ಶಿಗಳ ಪ್ರಮುಖ ಕರ್ತವ್ಯ ಎಂದು ನುಡಿದರು.
ಪ್ರಪಂಚದ ಸಣ್ಣಪುಟ್ಟ ರಾಷ್ಟ್ರಗಳು ಪ್ರವಾಸೋದ್ಯಮದ ಲಾಭ ಪಡೆಯುತ್ತಿವೆ. ಆದರೆ, ಭಾರತ ಮಾತ್ರ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ ಎಂದ ಅವರು, ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ಹಾಗೂ ಪ್ರವಾಸಿ ಮಿತ್ರರಿಗೆ ಪರವಾನಗಿ ನೀಡುತ್ತಿರುವುದು ಎಂದು ದೇಶಪಾಂಡೆ ಹೇಳಿದರು.
ಪ್ರವಾಸೋದ್ಯಮದ ಅಭಿವೃದ್ಧಿಯಾದರೆ ಅನೇಕ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಒಂದು ಕಾಲದಲ್ಲಿ ಒಂದು ವರ್ಗಕ್ಕೆ ಮಾತ್ರ ಪ್ರವಾಸ ಸೀಮಿತಗೊಂಡಿತ್ತು. ಆದರೆ, ಇದೀಗ ಬಡ-ಸಾಮಾನ್ಯರು ಪ್ರವಾಸ ಹೋಗುವುದು ಅಚ್ಚರಿಯಲ್ಲ ಎಂದ ಸಚಿವರು, ಯಾವುದೇ ಕರ್ತವ್ಯವಿರಲಿ ಜವಾಬ್ದಾರಿಯಿಂದ ನಿರ್ವಹಿಸಲು ಮುಂದೆ ಬಂದರೆ ಯಶಸ್ಸು ಕಾಣಬಹುದು ಎಂದು ಅಭಿಪ್ರಾಯಪಟ್ಟರು.
500 ಅರ್ಹ ಅಭ್ಯರ್ಥಿಗಳಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ನೀಡಲು ಪ್ರವಾಸೋದ್ಯಮ ಇಲಾಖೆಯು ರಾಜ್ಯದ 12 ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಿದೆ. ಈ ಪ್ರವಾಸಿ ಮಾರ್ಗದರ್ಶಿಯಾಗುವವರಿಗೆ 45 ವರ್ಷದೊಳಗಿನವರಾಗಿರಬೇಕು ಹಾಗೂ ಕನಿಷ್ಠ ಶೈಕ್ಷಣಿಕ ಅರ್ಹತೆ ದ್ವಿತೀಯ ಪಿಯುಸಿ ಉತ್ತೀರ್ಣವಾಗಿರಬೇಕೆಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕ.ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಎ.ಹುಸೇನ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷ ಅಸಗೋಡು ಜಯಸಿಂಹ, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜ್‌ಕುಮಾರ್ ಖತ್ರಿ, ನಿರ್ದೇಶಕಿ ಜಿ.ಸತ್ಯವತಿ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಡಿ.ಉದಪುಡಿ, ಪಾಲಿಕೆ ಸದಸ್ಯ ಎಸ್.ಸಂಪತ್‌ಕುಮಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.
ಹೊಸಬರಿಗೆ ಪಾಠ ಮಾಡಿದ ಸಚಿವರು
ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯಿಂದ ಹೊಸದಾಗಿ ತರಬೇತಿ ಪಡೆದಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಹಾಗೂ ಪ್ರವಾಸಿ ಮಿತ್ರರಿಗೆ ಸಚಿವ ಆರ್.ವಿ.ದೇಶಪಾಂಡೆ ಪಾಠ ಮಾಡಿದರು.
ಹೊಸ ಮಾರ್ಗದರ್ಶಿ ಮತ್ತು ಮಿತ್ರರು ಸ್ವಚ್ಛವಾಗಿರಬೇಕು. ಪ್ರವಾಸಿ ತಾಣದ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆ, ಆಸ್ಪತ್ರೆಗಳ ಮಾಹಿತಿಯ ಕೈಪಿಡಿಯನ್ನಿಟ್ಟುಕೊಂಡು ಅಗತ್ಯ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರವಾಸಿ ಮಾರ್ಗದರ್ಶಿಗಳಿಗೆ ಪೊಲೀಸ್ ಸಿಬ್ಬಂದಿಗೆ ಇರುವ ಎಲ್ಲ ಅಧಿಕಾರ ನೀಡಲಾಗಿದೆ. ಆದರೆ, ಇದನ್ನು ಗಂಭೀರವಾಗಿ ಬಳಕೆ ಮಾಡಬೇಕೆಂದು ಸಲಹೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಜಪಾನ್, ಫ್ರೆಂಚ್, ರಶ್ಯ, ಚೀನಾ ದೇಶಗಳ ಭಾಷೆಯ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಪ್ರಶ್ನೆಯನ್ನು ಹಾಕಿ ವಿದೇಶಿ ಭಾಷೆಯಲ್ಲಿ ಉತ್ತರಿಸುವಂತೆ ಹೇಳಿದರು.







