ಪ್ರಮುಖ ಆರೋಪಿ ರಾಮ ವೃಕ್ಷ ಯಾದವ್ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯದ ಆದೇಶ
ಮಥುರಾ ಹಿಂಸಾಚಾರ ಪ್ರಕರಣ
ಮಥುರಾ, ಜೂ.16: 29 ಜನರನ್ನು ಬಲಿ ತೆಗೆದುಕೊಂಡಿರುವ ಮಥುರಾದ ಜವಾಹರಬಾಗ್ ಹಿಂಸಾಚಾರದ ಪ್ರಮುಖ ಆರೋಪಿ ರಾಮ ವೃಕ್ಷ ಯಾದವ್ ಸಾವನ್ನಪ್ಪಿದ್ದಾನೆ ಎನ್ನುವುದನ್ನು ಸಿದ್ಧಪಡಿಸಲು ಪೊಲೀಸರು ಸಲ್ಲಿಸಿರುವ ಪುರಾವೆಗಳು ಹೆಚ್ಚು ವಿಶ್ವಾಸಾರ್ಹವಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮೃತದೇಹದ ಡಿಎನ್‌ಎ ಪರೀಕ್ಷೆಗೆ ಆದೇಶಿಸಿದೆ.
ಆರೋಪಿ ಯಾದವ್‌ನದೆಂದು ಹೇಳಲಾಗಿರುವ ಮೃತದೇಹದ ಕಾಯ್ದಿರಿಸಲಾಗಿರುವ ಸ್ಯಾಂಪಲ್‌ಗಳನ್ನು ಡಿಎನ್‌ಎ ಪರೀಕ್ಷೆಗಾಗಿ ಆರೋಪಿಯ ನಿಕಟ ಸಂಬಂಧಿಕರ ಡಿಎನ್‌ಎ ಸ್ಯಾಂಪಲ್‌ಗಳೊಂದಿಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸುವಂತೆ ನ್ಯಾ.ವಿವೇಕಾನಂದ ತ್ರಿಪಾಠಿ ಅವರು ಬುಧವಾರ ಪೊಲೀಸರಿಗೆ ಆದೇಶಿಸಿದ್ದಾರೆ.
ವಿಚಾರಣೆಯ ಸಂದರ್ಭ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಮರಣೋತ್ತರ ಪರೀಕ್ಷೆಯ ಪ್ರತಿಯಲ್ಲಿ ತಪ್ಪುಗಳಿರುವುದನ್ನು ಬೆಟ್ಟುಮಾಡಿದ ನ್ಯಾಯಾಧೀಶರು, ಮೃತದೇಹವು ಯಾದವ್‌ದು ಎಂದು ಆತನ ಸಹಾಯಕರು ಗುರುತಿಸಿರುವುದನ್ನು ಆಕ್ಷೇಪಿಸಿದರು. ಆತನ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಬೇಕಾಗಿತ್ತು ಎಂದು ಅವರು ಒತ್ತಿ ಹೇಳಿದರು.





