ಮ.ಪ್ರದೇಶ: ವಾಟ್ಸ್‌ಆ್ಯಪ್‌ನಲ್ಲಿ ಇಸ್ಲಾಮ್ ವಿರೋಧಿ ಟೀಕೆ
ವಿಹಿಂಪ ನಾಯಕನ ಸೆರೆ
ಬರ್ವಾನಿ, ಜೂ.16: ವಾಟ್ಸ್‌ಆ್ಯಪ್‌ನಲ್ಲಿ ಪ್ರವಾದಿ ಮುಹಮ್ಮದ್‌ರನ್ನು ಅವಹೇಳನಗೈದು ಸಂದೇಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಬರ್ವಾನಿ ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನ ಉಪಾಧ್ಯಕ್ಷ ಸಂಜಯ ಭಾವಸಾರ(35) ಅವರನ್ನು ಗುರುವಾರ ಬೆಳಗಿನ ಜಾವ ಜಿಲ್ಲೆಯ ಬಲ್ವಾಡಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಭಾವಸಾರ ವಿರುದ್ಧ ಮುಸ್ಲಿಮರ ಗುಂಪೊಂದು ದೂರು ಸಲ್ಲಿಸಿದ ಎರಡೇ ಗಂಟೆಗಳಲ್ಲಿ ಪೊಲೀಸರು ಅವರನ್ನು ಬಂಧಿಸಿ ಲಾಕಪ್‌ಗೆ ತಳ್ಳಿದ್ದಾರೆ.
ಭಾವಸಾರ ವಿರುದ್ಧ ಐಪಿಸಿಯ ಕಲಂ295-ಎ ಮತ್ತು ಐಟಿ ಕಾಯ್ದೆಯ ಕಲಂ 66ರಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸೆಂಧ್ವಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಸುನೀಲ್ ಜಾಲಿ ತಿಳಿಸಿದರು.
ಬೆಳಗ್ಗೆ ಭಾವಸಾರ ಬಂಧನದ ಸುದ್ದಿ ಹರಡುತ್ತಿದ್ದಂತೆ ಬಲಪಂಥೀಯ ಕಾರ್ಯಕರ್ತರು ಗ್ರಾಮದಲ್ಲಿ ಬಂದ್‌ಗೆ ಕರೆ ನೀಡಿದರಾದರೂ ಅದು ವಿಫಲಗೊಂಡಿತು. ಅಂಗಡಿ-ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು.
ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು,ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಭಾವಸಾರ ಜಾಮೀನು ಬಿಡುಗಡೆಗೊಂಡ ಬಳಿಕ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು.





