ಗಗನಕ್ಕೇರಿದ ಬೇಳೆ

ದಾಸ್ತಾನು ಹೆಚ್ಚಳಕ್ಕೆ ಕೇಂದ್ರ ನಿರ್ಧಾರ
ಹೊಸದಿಲ್ಲಿ, ಜೂ.16: ಸರಕಾರವು ಅದೇನು ಕ್ರಮ ಕೈಗೊಳ್ಳುತ್ತಿದೆಯೋ...? ಬೇಳೆಕಾಳುಗಳ ಬೆಲೆಗಳು ಮಾತ್ರ ಯಾವುದೇ ನಿಯಂತ್ರಣಕ್ಕೆ ಸಿಕ್ಕದೇ ದಿನೇದಿನೇ ಏರುತ್ತಲೇ ಇವೆ. ಗುರುವಾರ ಬೇಳೆಕಾಳುಗಳು ಇನ್ನಷ್ಟು ಬೆಲೆಏರಿಕೆಯನ್ನು ದಾಖಲಿಸಿದ್ದು, ಉದ್ದಿನ ಬೇಳೆಯಂತೂ ಡಬಲ್ ಸೆಂಚುರಿಯ ಸಮೀಪಕ್ಕೆ ತಲುಪಿದೆ. ಇದೇ ವೇಳೆ ಪ್ರತೀ ಕೆಜಿಗೆ 120 ರೂ.ಸಬ್ಸಿಡಿ ದರದಲ್ಲಿ ಬೇಳೆಕಾಳುಗಳ ಚಿಲ್ಲರೆ ಮಾರಾಟಕ್ಕಾಗಿ ಕಾಯ್ದಿಟ್ಟ ದಾಸ್ತಾನನ್ನು ಐದು ಪಟ್ಟುಗಳಷ್ಟು ಹೆಚ್ಚು ಅಂದರೆ ಎಂಟು ಲಕ್ಷ ಟನ್‌ಗಳಿಗೆ ಹೆಚ್ಚಿಸಲು ಕೇಂದ್ರವು ನಿರ್ಧರಿಸಿದೆ.
ಆದರೆ ಅಗ್ಗದ ದರಗಳಲ್ಲಿ ಚಿಲ್ಲರೆ ಮಾರಾಟಕ್ಕಾಗಿ ಬೇಳೆಕಾಳುಗಳನ್ನು ಪಡೆದುಕೊಳ್ಳಲು ಹೆಚ್ಚಿನ ರಾಜ್ಯಗಳು ಆಸಕ್ತಿಯನ್ನು ತೋರಿಸುತ್ತಿಲ್ಲ. ಹೀಗಾಗಿ ಕಾಯ್ದಿಟ್ಟ ದಾಸ್ತಾನಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬೇಳೆಕಾಳುಗಳ ಖರೀದಿಯು ಬೆಲೆಏರಿಕೆಯನ್ನು ನಿಯಂತ್ರಿಸಲು ನೆರವಾಗುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸು ತ್ತಿರುವ ಅಂಕಿಅಂಶಗಳಂತೆ ಗುರುವಾರ ಮಾರುಕಟ್ಟೆಯಲ್ಲಿ ಉದ್ದಿನ ಬೇಳೆಯ ಗರಿಷ್ಠ ಮಾರಾಟ ದರವು ಪ್ರತಿ ಕೆಜಿಗೆ 196 ರೂ.ತಲುಪಿದ್ದರೆ, ಪ್ರತಿ ಕೆಜಿಗೆ ತೊಗರಿ ಬೇಳೆ 166 ರೂ.ಗೆ, ಹೆಸರು ಬೇಳೆ 120 ರೂ.ಗೆ, ಮಸೂರ್ 105 ರೂ.ಗೆ ಮತ್ತು ಕಡಲೆ 93 ರೂ.ಗೆ ಮಾರಾಟವಾಗುತ್ತಿದ್ದವು.
ಮಹತ್ವದ ಬೆಳವಣಿಗೆಯೊಂದರಲ್ಲಿ ಸರಕಾರವು ಬೇಳೆಕಾಳುಗಳ ಕಾಯ್ದಿಟ್ಟ ದಾಸ್ತಾನನ್ನು 1.5 ಲ.ಟನ್‌ಗಳಿಂದ 8 ಲ.ಟನ್‌ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಆಹಾರ ಸಚಿವಾಲಯವು ಬುಧವಾರ ತಡರಾತ್ರಿ ತಿಳಿಸಿದೆ. ವಿತ್ತಸಚಿವ ಅರುಣ್ ಜೇಟ್ಲಿಯವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಈ ವರ್ಷ 1.5 ಲ.ಟನ್ ಬೇಳೆಕಾಳುಗಳ ಕಾಯ್ದಿಟ್ಟ ದಾಸ್ತಾನು ಪ್ರಾಥಮಿಕ ಗುರಿಯಾಗಿತ್ತು. ಈ ಉದ್ದೇಶಕ್ಕಾಗಿ ಈವರೆಗೆ 1.15 ಲ.ಟನ್ ಬೇಳೆಕಾಳುಗಳನ್ನು ಖರೀದಿಸಲಾಗಿದ್ದು, ಇದನ್ನು ಸಬ್ಸಿಡಿ ದರಗಳಲ್ಲಿ ಚಿಲ್ಲರೆ ಮಾರಾಟಕ್ಕಾಗಿ ರಾಜ್ಯಗಳಿಗೆ ಪೂರೈಸಲಾಗುತ್ತಿದೆ.







