ಸಿದ್ದರಾಮಯ್ಯ ಹೀಗೇಕೆ ?

ಅದು 2009. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು. ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ. ಬಿಜೆಪಿಯ ಆಪರೇಶನ್ ಕಮಲಕ್ಕೆ ಕಾಂಗ್ರೆಸ್‌ನ ಒಂದೊಂದೇ ವಿಕೆಟ್‌ಗಳು ಉರುಳುತ್ತಿದ್ದವು. ಹಾಗೆ ಉರುಳಿದ ವಿಕೆಟ್ ಪೈಕಿ ಬೆಂಗಳೂರಿನ ಗೋವಿಂದರಾಜ ನಗರದ ಸೋಮಣ್ಣರವರ ವಿಕೆಟ್ ಕೂಡಾ ಒಂದು. ಸಹಜವಾಗಿಯೇ ಉಪಚುನಾವಣೆ ಬಂತು. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೂ ಅಗ್ನಿಪರೀಕ್ಷೆ ಮತ್ತು ಪ್ರತಿಷ್ಠೆಯ ಪ್ರಶ್ನೆ ಕೂಡಾ. ಅಖಾಡ ಸಿದ್ದವಾಯಿತು...ಸಿದ್ದರಾಮಯ್ಯ ಭರ್ಜರಿ ಪ್ರಚಾರ ಮಾಡಿದ್ರು. ಸಿದ್ದರಾಮಯ್ಯನವರ ಪ್ರಚಾರಕ್ಕೋ, ಸೋಮಣ್ಣ ಮೇಲಿನ ಅಸಮಾಧಾನಕ್ಕೋ ಅಥವಾ ಒಕ್ಕಲಿಗರೆಂಬ ಜಾತಿ ಲೆಕ್ಕಾಚಾರದಿಂದಲೋ ಶಾಸಕ ಎಂ.ಕೃಷ್ಣಪ್ಪನವರ ಪುತ್ರ ಪ್ರಿಯಾ ಕೃಷ್ಣ ಗೆದ್ದು ಬಿಟ್ಟರು. ಸಿದ್ದರಾಮಯ್ಯ ಒಳಗೊಳಗೇ ಬೀಗಿದರು. ಯಾಕೆಂದ್ರೆ ಅಂದು ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರವಾಗಿ ಯಡಿಯೂರಪ್ಪ ಸೇರಿದಂತೆ ಇಡೀ ಸಂಪುಟವೇ ಅಖಾಡಕ್ಕೆ ಇಳಿದಿತ್ತು.
ಕಾಲಚಕ್ರ ಉರುಳಿತು....2016ರಲ್ಲಿ ಇತಿಹಾಸ ಪುನರಾವರ್ತನೆ ಯಾಯಿತು. ಅದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ. ಒಂದೇ ವ್ಯತ್ಯಾಸ ಅಂದ್ರೆ, ಯಾವುದೇ ಆಪರೇಶನ್ನಿನಿಂದ ನಡೆದ ಚುನಾವಣೆಯಲ್ಲ ಅದು. ಅಭ್ಯರ್ಥಿಯ ಗೊಂದಲದ ಬಳಿಕ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದದ್ದು ರೆಹಮಾನ್ ಷರೀಫ್. ಅಂದು ಯಡಿಯೂರಪ್ಪಮುಖ್ಯಮಂತ್ರಿಯಾಗಿದ್ದರೆ, ಈಗ ಅದು ಉಲ್ಟಾ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಈ ಉಪಚುನಾವಣೆಯನ್ನು ಎದುರಿಸಿದರು. ಆದರೆ, ರೆಹಮಾನ್ ಸೋತರು. ಆ ಸೋಲಿಗೆ ಪರೋಕ್ಷವಾಗಿ ಸಿದ್ದರಾಮಯ್ಯನವರೂ ಕಾರಣ ಎಂಬ ಆರೋಪ ಕೇಳಿಬಂತು.- ಈ ಎರಡು ಘಟನೆಗಳು ಸಿದ್ದರಾಮಯ್ಯ ತಾಕತ್ತಿನ ಬಗ್ಗೆ ಗೊಂದಲ ಮೂಡಿಸುವುದು ಸಹಜ. ಇತ್ತೀಚೆಗಿನ ಅವರ ನಡವಳಿಕೆ ಅವರ ಮೇಲಿದ್ದ ಭಾರೀ ನಿರೀಕ್ಷೆಯನ್ನು ಸ್ವತಃ ಸ್ವಪಕ್ಷೀಯರನ್ನೇ ನಿರಾಸೆಗೊಳಿಸಿದೆ. 2013ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರಿನ ಮೂರೂ ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿತು. ಇದಕ್ಕೂ ಸಿದ್ದರಾಮಯ್ಯನವರನ್ನೇ ಹೊಣೆಯಾಗಿಸುತ್ತಾರೆ ಅವರದೇ ಪಕ್ಷದ ಶಾಸಕರು. ಜೊತೆಗೆ, ಪ್ರತಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯನವರು ತನ್ನ ಶಿಷ್ಯ ಬೈರತಿ ಸುರೇಶ್‌ರನ್ನು ಗೆಲ್ಲಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿಯನ್ನು ಸೋಲುವಂತೆ ಮಾಡಿದ್ದು ಕೂಡಾ ಅವರ ವಿರುದ್ಧ ಆಂತರಿಕ ಅಸಮಾಧಾನ ಕ್ರೋಡೀಕರಣವಾಗಲು ಕಾರಣವಾದದ್ದು ಸುಳ್ಳಲ್ಲ. ಹರಳುಗಟ್ಟುತ್ತಿರುವ ಅಸಮಾಧಾನ
ಮುಖ್ಯಮಂತ್ರಿ ಗದ್ದುಗೆಯೇರಿ ಮೂರು ವಸಂತಗಳನ್ನು ಮುಗಿಸಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಯಾಕಿಷ್ಟು ಎಡವಟ್ಟು ಮಾಡಿಕೊಂಡರು ಎಂಬ ಪ್ರಶ್ನೆ ಸಹಜ.ಅದಕ್ಕೆ ಕೊಡುವ ಕಾರಣವೂ ವಿಚಾರಾರ್ಹವಾದದ್ದು. ಕಾಂಗ್ರೆಸ್‌ನ ಅಸ್ತಿತ್ವದ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದರಲ್ಲೂ ಇಲ್ಲಿ ಚುನಾವಣೆಯ ವೇಳೆ ಜಾತಿ ಸಮೀಕರಣವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸದ್ಯ ಅತ್ಯಂತ ದೊಡ್ಡ ಜಾತಿಯೆಂದರೆ, ಒಕ್ಕಲಿಗರು. ಹಾಗೆ ನೊಡಿದರೆ, ಯಾರು ಏನೇ ಅಂದರೂ ಸದ್ಯಕ್ಕೆ ಒಕ್ಕಲಿಗರ ನಾಯಕ ಎಂದು ಗುರುತಿಸಿಕೊಳ್ಳುವ ಮುಖಂಡ ಯಾವಪಕ್ಷದಲ್ಲೂ ಇಲ್ಲ. (ಆರ್. ಅಶೋಕ್, ಎಚ್.ಡಿ. ಕುಮಾರಸ್ವಾಮಿ ತಾವು ಒಕ್ಕಲಿಗರ ನಾಯಕರೆಂದು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದುಂಟು) ಹಾಗಾಗಿ ಒಕ್ಕಲಿಗ ಮತಗಳು ಇಲ್ಲಿ ಆಯಾ ನಾಯಕನ ವರ್ಚಸ್ಸಿನ ಮೇಲೆ ಕ್ರೋಡೀಕರಣಗೊಂಡಿರುವುದು ಸ್ಪಷ್ಟ. ಹೀಗಿರುವಾಗ ಈಗ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಅವಕಾಶ ನೀಡುವ ವಿಚಾರದಲ್ಲಿ ಒಕ್ಕಲಿಗರನ್ನು ನಿರ್ಲಕ್ಷಿಸಿದ್ದಾರೆ ಎಂಬ ಅಸಮಾಧಾನ ಜೋರಾಗಿಯೇ ಇದೆ. ಮಂತ್ರಿ ಪದವಿಯ ಆಕಾಂಕ್ಷಿತರ ವಾದವೆಂದರೆ, ಈಗ ಸಂಪುಟದಲ್ಲಿರುವವರ ಪೈಕಿ ಕೃಷ್ಣ ಬೈರೇ ಗೌಡ ಹೊರತುಪಡಿಸಿ ಉಳಿದವರ್ಯಾರೂ ಒಕ್ಕಲಿಗರಲ್ಲ ಮತ್ತು ರೋಷನ್ ಬೇಗ್ ಹೊರತುಪಡಿಸಿ ಕೃಷ್ಣ ಬೈರೇಗೌಡರೂ ಸೇರಿದಂತೆ ಯಾರೂ ಬೆಂಗಳೂರಿಗರಲ್ಲ ಎಂಬುದು. ಕೆ.ಜೆ. ಜಾರ್ಜ್ ಮೂಲತಃ ಕೇರಳಿಗರು, ಕೃಷ್ಣ ಬೈರೇ ಗೌಡರು ಕೋಲಾರದವರು, ದಿನೇಶ್ ಗುಂಡೂರಾವ್ ಬ್ರಾಹ್ಮಣರು ಹಾಗೇ ಮೂಲತಃ ಕೊಡಗಿನವರು. ಇನ್ನು ರಾಮಲಿಂಗಾ ರೆಡ್ಡಿ, ರೆಡ್ಡಿ ಸಮುದಾಯಕ್ಕೆ ಸೇರಿದವರು ಎಂಬ ಲೆಕ್ಕಾಚಾರ ಮುಂದಿಡುತ್ತಾರೆ. ಒಕ್ಕಲಿಗ ಶಾಸಕರ ಪ್ರಕಾರ, ಯಾರೂ ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಬೆಂಗಳೂರಿನ ಮಟ್ಟಿಗೆ ಸಿದ್ದರಾಮಯ್ಯ ಒಕ್ಕಲಿಗ ಶಾಸಕರನ್ನು ನಿರ್ಲಕ್ಷಿಸುವ ಮೂಲಕ ಆಂತರಿಕ ಅಸಮಾಧಾನಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳುತ್ತಾರೆ. ಅವರ ಈ ನಿಲುವಿನಿಂದಾಗಿ ಒಕ್ಕಲಿಗ ಮತಗಳು ಕಾಂಗ್ರೆಸ್‌ನಿಂದ ದೂರ ಸರಿದರೂ ಅಚ್ಚರಿಯಲ್ಲ ಎಂಬುದು ಕೆಲ ಶಾಸಕರ ವಾದ. ಇದರೊಂದಿಗೆ ಬೆಂಗಳೂರಿನ ಮಟ್ಟಿಗೆ ಅತ್ಯಂತ ಶ್ರೀಮಂತ ಮತ್ತು ಸಜ್ಜನ ರಾಜಕಾರಣಿ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ರಣತಂತ್ರದ ಹಿಂದೆ ಸಾಕಷ್ಟು ಕೆಲಸ ಮಾಡಿದವರು ಕೂಡಾ. ಆ ಸಂದರ್ಭದಲ್ಲಿ ಮಂತ್ರಿಪದವಿಯ ಭರವಸೆ ಪಡೆದಿದ್ದವರು ಕೂಡಾ. ಆದರೆ, ಅವರಿಗೂ ಸಿದ್ದರಾಮಯ್ಯ ಕೈಕೊಟ್ಟಿರುವುದಕ್ಕೆ ಒಕ್ಕಲಿಗ ನಾಯಕರಲ್ಲಿ ಅಸಮಾಧಾನ ಗುಪ್ತಗಾಮಿನಿಯಾಗಿಯೇ ಇದೆ.
ಒಂದೆಡೆ, ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರಲ್ಲ ಎಂಬ ಅಪವಾದ, ಮತ್ತೊಂಡೆದೆ ಎಚ್.ಮಹದೇವಪ್ರಸಾದ್, ಮಹದೇವಪ್ಪ, ಬೈರತಿ ಬಸವರಾಜ್, ಬೈರತಿ ಸುರೇಶ್‌ರಂತವರನ್ನು ಅಗತ್ಯಕ್ಕಿಂತ ಹೆಚ್ಚೇ ತನ್ನ ಆಪ್ತ ಬಳಗದಲ್ಲಿರಿಸಿಕೊಂಡಿರುವುದು ಕೂಡಾ ಕೆಲ ಶಾಸಕರ ಬೇಸರಕ್ಕೆ ಕಾರಣ. ಅದರಿಂದ ಬೇಸತ್ತು ಅವರೆಲ್ಲ ಮುಖ್ಯಮಂತ್ರಿಗಳಿಂದ ಅಂತರ ಕಾಯ್ದು ಕೊಳ್ಳುವಂತೆ ಮಾಡಿದೆ. ಸ್ವಭಾವತಃ ದುರಹಂಕಾರಿಯಲ್ಲದಿದ್ದರೂ ಅವರ ನಡೆನುಡಿ ಬಹುತೇಕ ಶಾಸಕರನ್ನು ಭ್ರಮನಿರಸನಗೊಳಿಸಿರುವುದು ಸುಳ್ಳಲ್ಲ. ಈ ಕಾರಣಗಳಿಗಾಗಿಯೇ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಾಗಲೀ, ವಿಧಾನ ಸಭೆ ಅಧಿವೇಶನದಲ್ಲಾಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಒಕ್ಕೊರಲ ಬೆಂಬಲ ಸಿಕ್ಕಿಲ್ಲ ಎಂಬುದು ವಾಸ್ತವ ಸಂಗತಿ. ಸಿದ್ದರಾಮಯ್ಯನವರು, ‘‘ನನ್ನ ಬದುಕಿನಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ ಬದುಕಿದವನು’’ ಎಂದು ಪದೇ ಪದೇ ಹೇಳಿಕೊಳ್ಳುತ್ತಾರೆ. ಅದು ನಿಜವಿರಬಹುದು. ಕೈ ಬಾಯಿ ಕೆಡಿಸಿಕೊಂಡವರಲ್ಲ. ಆದರೆ, ಅವರ ಸುತ್ತಮುತ್ತಲಿರುವವರೂ ಹಾಗೇ ಇರಬೇಕೆಂದು ಸಮಾಜ ಬಯಸುವುದು ಸಹಜ. ನನ್ನ ಆಪ್ತ ಬಳಗವೂ ನನ್ನ ಹಾಗೇ ಕಪ್ಪುಚುಕ್ಕೆ ಇಲ್ಲದವರು ಎಂದು ಎದೆತಟ್ಟಿ ಹೇಳಿಕೊಳ್ಳಬಲ್ಲರೇ ಸಿದ್ದರಾಮಯ್ಯ? ಇದು ಬಹು ಚರ್ಚಿತ ವಿಷಯ.
ಯಾಕಿಷ್ಟು ಉಡಾಫೆ?
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಅವರ ಬಗೆಗಿನ ನಿರೀಕ್ಷೆಗಳು ಬೆಟ್ಟದಷ್ಟಿತ್ತು. ಆದರೆ, ಒಟ್ಟಾರೆ ಕಾರ್ಯನಿರ್ವಹಣೆ ಯಾರಿಗೂ ತೃಪ್ತಿ ತಂದಿಲ್ಲ. ಅವರ ಸಾಮಾಜಿಕ ನ್ಯಾಯದ ಕುರಿತ ಕಾಳಜಿ, ಜನಪರ, ಪ್ರಗತಿಪರ ಚಿಂತನೆಗಳು ಪ್ರಶ್ನಾತೀತ. ಆದರೆ, ಓರ್ವ ಜನಪ್ರತಿನಿಧಿಯಾಗಿ ಹಲವಾರು ಬಾರಿ ಯಡವಟ್ಟು ಮಾಡಿಕೊಂಡರು. ಡಿ.ಕೆ. ರವಿ ಪ್ರಕರಣ, ಪೋಲಿಸ್ ಅಧಿಕಾರಿ ಡಾ.ರವೀಂದ್ರನಾಥ್ ಪ್ರಕರಣ, ಶಾಸಕ ಶಿವನ ಗೌಡ ನಾಯಕ್ ಗಲಾಟೆ, ಅಲ್ಲಿಂದ ಹಿಡಿದು ಉಡುಗೊರೆಯಾಗಿ ಪಡೆದ ವಾಚ್ ಮತ್ತು ಅನುಪಮಾ ಶೆಣೈವರೆಗಿನ ಯಾವುದೇ ಪ್ರಕರಣಗಳನ್ನು ಸಿದ್ದರಾಮಯ್ಯ ಸೇರಿದಂತೆ ಅವರ ತಂಡ ನಿಭಾಯಿಸುವಲ್ಲಿ ವಿಫಲವಾಯಿತು. ಅದರ ಪರಿಣಾಮ ಸಿದ್ದರಾಮಯ್ಯ ಟಾರ್ಗೆಟ್ ಆದರು. ಉಡಾಫೆಯ ವರ್ತನೆ ಮತ್ತು ಹೇಳಿಕೆಗಳು ಎಷ್ಟೋ ಬಾರಿ ಸಿದ್ದರಾಮಯ್ಯನವರಿಗೆ ಕಾಸ್ಟ್ಲಿ ಆಯಿತು. ಒಂದು ಚಿಕ್ಕ ಉದಾಹರಣೆ ಸಾಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಚಿವ ನಿರಾಣಿ ಕಾರು ಉಡುಗೊರೆ ನೀಡಿದ್ದು ವಿವಾದವಾಗುತ್ತಿದ್ದಂತೆ ಕಾರನ್ನು ಎರಡೇ ದಿನದಲ್ಲಿ ಹಿಂದಿರುಗಿಸಿ ಕೈತೊಳೆದುಕೊಂಡುಬಿಟ್ಟರು. ಆದರೆ ಸಿದ್ದರಾಮಯ್ಯ ಅವರು ಧರಿಸಿದ ವಾಚ್ ವಿವಾದಕ್ಕೆ ಈಡಾದಾಗ ಅಹಂಕಾರದ ಹೇಳಿಕೆ ನೀಡುವ ಮೂಲಕ ವಿವಾದದ ಬೆಂಕಿಗೆ ತಾವೇ ತುಪ್ಪಸುರಿದರು. ಅದರ ಪರಿಣಾಮ, ಆ ವಿಚಾರ 15 ದಿನಗಳಿಗೂ ಹೆಚ್ಚು ಕಾಲ ಅನಗತ್ಯ ಚರ್ಚೆಗೆ ಕಾರಣವಾಯಿತು. ಒಟ್ಟಾರೆ ಬೆಳವಣಿಗೆಗಳನ್ನು ಗಮನಿಸಿದರೆ ಸಿದ್ದರಾಮಯ್ಯನವರ ವಿರುದ್ಧ ಅಸಮಾಧಾನದ ಅಲೆ ಜೋರಾಗಿಯೇ ಇದೆ. ಹಾಗಾಗಿಯೇ, ಒಂದು ಹಂತದಲ್ಲಿ ‘ಸಮಾನ ಮನಸ್ಕರ’ ತಂಡ ಸೃಷ್ಟಿಸಿ ತನ್ನ ಎದುರಾಳಿಗಳಿಗೆ ಟಾಂಗ್ ಕೊಡುವಲ್ಲಿಯ ವರೆಗೂ ಸಿದ್ದರಾಮಯ್ಯ ತಂತ್ರಗಾರಿಕೆ ಮೆರೆಯಬೇಕಾಯಿತು. ಸದ್ಯಕ್ಕೆ ಹೈಕಮಾಂಡ್ ಬಲಹೀನವಾಗಿದೆ. ಆದ್ದರಿಂದ ಸಿದ್ದು ಬಚಾವಾಗಿದ್ದಾರೆ ಇದು ಎಲ್ಲರಿಗೂ ಗೊತ್ತಿರುವ ವಾಸ್ತವ ಸಂಗತಿ. ಕೊನೇ ಮಾತು:
ಹಡಗಿನ ಕಪ್ತಾನ ಅಂದ ಮೇಲೆ ಹಡಗನ್ನು ಸುರಕ್ಷಿತವಾಗಿ ದಡ ಸೇರಿಸುವ ಜವಾಬ್ದಾರಿ ಇದೆ. ಅದು ಬಿಟ್ಟು ತನಗೆ ಬೇಕಾದಂತೆ ನಡೆಸಿಕೊಂಡು ಹೋಗುತ್ತೇನೆ ಎಂಬ ದರ್ದಿಗೆ ಬಿದ್ದರೆ, ಅಪಾಯ ತಪ್ಪಿದ್ದಲ್ಲ. ಕೆಲವೊಮ್ಮೆ ಹರವಾಗಿ ಕಾಣುವ ಸಮುದ್ರದಲ್ಲಿ ಬಂಡೆಗಳಿರುವುದು ಗೊತ್ತೇ ಆಗುವುದಿಲ್ಲ. ಆ ಎಚ್ಚರ ಇರದಿದ್ದರೆ, ದುರಂತ ಖಚಿತ. ಎಡಬಿಡಂಗಿತನ, ಗೊಂದಲಮಯ ಹೇಳಿಕೆಗಳು, ಮಾತಿಗೂ ಕೃತಿಗೂ ಅಂತರ, ನಾನು ನಡೆದದ್ದೇ ದಾರಿ ಎಂಬ ಧೋರಣೆಯಿಂದ ಸಮಾಜವಾದಿ ನಾಯಕರೆಂಬ ಅಭಿದಾನ ಹೊಂದಿರುವ ಸಿದ್ದರಾಮಯ್ಯನವರು ತಾವು ಮುಖ್ಯಮಂತ್ರಿಯಾಗಿ ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡುವುದು ತೀರಾ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 40 ಸೀಟು ಬಂದರೆ ಹೆಚ್ಚು ಎಂಬುದು ಕಾಂಗ್ರೆಸ್ ಪಡಸಾಲೆಯಿಂದ ಕೇಳಿ ಬರುವ ಮಾತು. ಇನ್ನಂತೂ ಸಿದ್ದರಾಮಯ್ಯನವರಿಗೆ ಅಗ್ನಿಪರೀಕ್ಷೆಯ ದಿನಗಳು. ಏನೇ ಆದರೂ, ಹೈಕಮಾಂಡನ್ನು ಮಣಿಸುವ ಬಾಣಗಳು ಸಿದ್ದು ಬತ್ತಳಿಕೆಯಲ್ಲಿರಬಹುದು ....ಆದರೂ ಮುಂದೊಂದು ದಿನ ನನ್ನನ್ನು ನನ್ನವರೇ ಸೋಲಿಸಿದರು....ನನ್ನವರೇ ತುಳಿದರು ಎಂದು ಅವಲತ್ತುಕೊಳ್ಳುವುದಕ್ಕೆ ಅವಕಾಶವಿರದಂತೆ ನಡೆದುಕೊಳ್ಳುವುದು ವಿವೇಕದ ಹಾದಿ. ಬಿದ್ದರೆ ಗೊತ್ತೇ ಇದೆಯಲ್ಲ ಆಳಿಗೊಂದು ಕಲ್ಲು ಎಂಬ ಮಾತು...ಹಾಗಾಗದಿರಲಿ..







