ಕೋಪಾ ಅಮೆರಿಕ: ಕುತೂಹಲ ಕೆರಳಿಸಿದ ಕ್ವಾರ್ಟರ್‌ಫೈನಲ್

ಹವಾನ, ಜೂ.16: ನೂರನೆ ಆವೃತ್ತಿಯ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತದ ಪಂದ್ಯಗಳು ತೀವ್ರ ಕುತೂಹಲ ಕೆರಳಿಸಿವೆ.
ಈಗಾಗಲೇ ಕೊನೆಗೊಂಡಿರುವ ಗ್ರೂಪ್ ಹಂತದ ಪಂದ್ಯಗಳಲ್ಲಿ 8 ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿವೆ. ಈ ಎಂಟು ತಂಡಗಳ ಪೈಕಿ ಅರ್ಜೆಂಟೀನ, ಮೆಕ್ಸಿಕೊ ಹಾಗೂ ಚಿಲಿ ಪ್ರಶಸ್ತಿ ಜಯಿಸುವ ಫೇವ್ ತಂಡಗಳಾಗಿವೆ. ಕೊಲಂಬಿಯಾ ಹಾಗು ಆತಿಥೇಯ ಅಮೆರಿಕ ತಂಡಗಳನ್ನು ಕಡೆಗಣಿಸುವಂತಿಲ್ಲ.
ಅಮೆರಿಕ ತಂಡ ಗುರುವಾರ ಈಕ್ವೆಡಾರ್ ತಂಡವನ್ನು ಎದುರಿಸುವ ಮೂಲಕ ಕ್ವಾರ್ಟರ್ ಫೈನಲ್ ಕಾದಾಟ ಆರಂಭವಾಗಲಿದೆ. ಶುಕ್ರವಾರ ದಕ್ಷಿಣ ಅಮೆರಿಕದ ಪೆರು ಹಾಗೂ ಕೊಲಂಬಿಯ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ.
ಶನಿವಾರ ಮೆಕ್ಸಿಕೊ ಹಾಗೂ ಚಿಲಿ, ಅರ್ಜೆಂಟೀನ ಹಾಗೂ ವೆನೆಝುವೆಲಾ ತಂಡಗಳು ಮುಖಾಮುಖಿಯಾಗಲಿವೆ. ಉರುಗ್ವೆ ಹಾಗೂ ಬ್ರೆಝಿಲ್ ತಂಡಗಳು ಗ್ರೂಪ್ ಹಂತದಲ್ಲಿ ಟೂರ್ನಿಯಿಂದ ಹೊರನಡೆದಿರುವ ಕಾರಣ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಅಮೆರಿಕದಲ್ಲಿ ಮೆಕ್ಸಿಕೊ ನಾಗರಿಕರು ಭಾರೀ ಸಂಖ್ಯೆಯಲ್ಲಿ ನೆಲೆಸಿರುವ ಕಾರಣ ಆ ತಂಡಕ್ಕೆ ಅಮೆರಿಕ ಎರಡನೆ ತವರು ನೆಲವಾಗಿದೆ. ಮೆಕ್ಸಿಕೊ ಟೂರ್ನಿಯಲ್ಲಿ ಈ ತನಕ ಉತ್ತಮ ಪ್ರದರ್ಶನ ನೀಡಿದೆ. ಹಾಲಿ ಚಾಂಪಿಯನ್ ಚಿಲಿ ತಂಡ ಅಸ್ಥಿರ ಪ್ರದರ್ಶನ ನೀಡುತ್ತಿದೆ.







