ಸಂಪುಟ ಪುನಾರಚನೆ: ದಿಲ್ಲಿಗೆ ಸಿಎಂ ದೌಡು

ಅಹ್ಮದ್‌ಪಟೇಲ್, ಖರ್ಗೆ ಜೊತೆ ಸಮಾಲೋಚನೆ, 20ರಂದು ನೂತನ ಸಚಿವರ ಪದಗ್ರಹಣ?
ಹೊಸದಿಲ್ಲಿ, ಜೂ.16: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ಸಂಬಂಧ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಗುರುವಾರ ಸಂಜೆ 5:30ರ ಸುಮಾರಿಗೆ ದಿಲ್ಲಿ ತಲುಪಿದ ಮುಖ್ಯಮಂತ್ರಿ, ಮೊದಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ಪಟೇಲ್‌ರನ್ನು ಭೇಟಿ ಮಾಡಿ ಸಚಿವ ಸಂಪುಟ ಪುನಾರಚನೆ ಕುರಿತು ಮಹತ್ವದ ಮಾತುಕತೆ ನಡೆಸಿದರು.
ಆನಂತರ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಯಾರನ್ನೆಲ್ಲ ಕೈ ಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಿದರು. ಅಲ್ಲದೆ, ಅವಕಾಶ ವಂಚಿತವಾಗಿರುವ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲು ಮಾತುಕತೆ ನಡೆಸಿದ್ದಾರೆ.
ಸಚಿವರಾದ ಖಮರುಲ್‌ಇಸ್ಲಾಮ್, ಬಾಬುರಾವ್‌ಚಿಂಚನಸೂರ್, ಡಾ.ಶರಣ ಪ್ರಕಾಶ್‌ಪಾಟೀಲ್‌ರನ್ನು ಕೈ ಬಿಟ್ಟು, ಚಿತ್ತಾಪುರ ಶಾಸಕ ಪ್ರಿಯಾಂಕ್‌ಖರ್ಗೆ, ಜೇವರ್ಗಿ ಶಾಸಕ ಡಾ.ಅಜಯ್‌ಸಿಂಗ್, ಬಾಲ್ಕಿ ಶಾಸಕ ಈಶ್ವರ್‌ಖಂಡ್ರೆ, ಯಲಬುರ್ಗ ಶಾಸಕ ಬಸವರಾಜರಾಯರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀಯನ್ನು ಸಂಪುಟದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಹಿರಿಯ ನಾಯಕಿ ಮೋಟಮ್ಮಗೆ ಅವಕಾಶ ನೀಡಲು ಪಕ್ಷದಲ್ಲಿ ಒತ್ತಡ ಹೆಚ್ಚುತ್ತಿದೆ. ಅದೇ ರೀತಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಬದಲು ಶಾಂತಿನಗರ ಶಾಸಕ ಎನ್.ಎ.ಹಾರೀಸ್‌ಗೆ ಅವಕಾಶ ನೀಡಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ನಗರಾಭಿವೃದ್ಧಿ ಸಚಿವ ವಿನಯ್‌ಕುಲಕರ್ಣಿಯನ್ನು ಕೈಬಿಟ್ಟು ಯುವ ಶಾಸಕ ಪ್ರಮೋದ್ ಮಧ್ವರಾಜ್‌ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಬದಲು ಅವರ ಪುತ್ರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಅವಕಾಶ ನೀಡಲು ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದ್ದಾರೆ.
ಜೂ.20ಕ್ಕೆ ಪ್ರಮಾಣವಚನ?: ಮುಖ್ಯಮಂತ್ರಿ ಸಂಭಾವ್ಯ ಸಚಿವರನ್ನು ಒಳಗೊಂಡ ಪಟ್ಟಿಯೊಂದಿಗೆ ಹೊಸದಿಲ್ಲಿಗೆ ತೆರಳಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ಲಭ್ಯವಾದರೆ, ಬಹುತೇಕ ಜೂ.20ರಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ.
ಹೊಸದಿಲ್ಲಿಯಲ್ಲಿ ಆಕಾಂಕ್ಷಿಗಳ ದಂಡು: ಸಚಿವ ಸಂಪುಟದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು, ಖಾತೆಗಳನ್ನು ಬದಲಾಯಿಸಿಕೊಳ್ಳಲು ಕೇಂದ್ರ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸುತ್ತಿದ್ದಾರೆ. ಅಲ್ಲದೆ, ಸುಮಾರು 25ಕ್ಕೂ ಹೆಚ್ಚು ಮಂದಿ ಶಾಸಕರು, ಸಚಿವರು ಸಂಪುಟ ಸೇರ್ಪಡೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ್, ಕೃಷಿ ಸಚಿವ ಕೃಷ್ಣಭೈರೇಗೌಡ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್‌ಗುಂಡೂರಾವ್‌ರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳಲು ಸಿದ್ದರಾಮಯ್ಯ ಉದ್ದೇಶಿಸಿದ್ದಾರೆ.
ಕೆಪಿಸಿಸಿಗೆ ಡಿಕೆಶಿ ಸಾರಥ್ಯ?: ವಿಧಾನಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯವನ್ನು ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಲಿಂಗಾಯತ ಸಮುದಾಯದ ನಾಯಕ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕಗೊಳ್ಳುತ್ತಿದ್ದಂತೆ, ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಪ್ರಬಲ ಸಮುದಾಯ ಒಕ್ಕಲಿ ಗರನ್ನು ಸೆಳೆಯಲು ಡಿ.ಕೆ.ಶಿವಕುಮಾರ್ ಸೂಕ್ತ ಆಯ್ಕೆ ಎಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೆರಡು ವರ್ಷಗಳ ಕಾಲ ಪಕ್ಷವನ್ನು ಬೇರುಮಟ್ಟದಲ್ಲಿ ಸಂಘಟನೆ ಮಾಡಲು ಯುವಕರು ಹಾಗೂ ಹಿರಿಯರನ್ನು ಒಳಗೊಂಡ ಸಮತೋಲಿತ ಹೊಸತಂಡವನ್ನು ರಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಸೋನಿಯಾ ಗಾಂಧಿ ಭೇಟಿ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶುಕ್ರವಾರ ಭೇಟಿಯಾಗಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸುತ್ತೇನೆ. ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಯಲ್ಲಿ ಚರ್ಚೆ ನಡೆಸಿದ್ದೇನೆ. ಯಾವ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ ಎನ್ನುವುದನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಎಲ್ಲ ಅಂತಿಮವಾದ ನಂತರ ತಿಳಿಸುತ್ತೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ







