ಹತ ನಕ್ಸಲನ ಲ್ಯಾಪ್‌ಟಾಪ್‌ನಲ್ಲಿ ಉನ್ನತ ನಾಯಕ-ಪತ್ನಿಯ ಸೆಲ್ಫಿ

ವಿಶಾಖಪಟ್ಟಣ, ಜೂ.16: ಮಾವೊವಾದಿಗಳ ಉನ್ನತ ನಾಯಕ ಹಾಗೂ ಪೂರ್ವ ವಲಯದ ಕಾರ್ಯದರ್ಶಿ ಚಲಪತಿ ಅಲಿಯಾಸ್ ಅಪ್ಪಾರಾವ್ ಎಂಬಾತ ಹೇಗಿದ್ದಾನೆ ಎಂಬ ಮಾಹಿತಿ ವಿಶಾಖಪಟ್ಟಣ ಗ್ರಾಮಾಂತರ ಪೊಲೀಸರಿಗೆ ಕೊನೆಗೂ ಲಭಿಸಿದೆ. ಹತ ಮಾವೊವಾದಿ ಆಝಾದ್ ಎಂಬಾತನ ಲ್ಯಾಪ್‌ಟಾಪ್‌ನಲ್ಲಿ ಚಲಪತಿ ಹಾಗೂ ಆತನ ಪತ್ನಿ, ಕೋರಾಪಟ್-ಶ್ರೀಕಾಕುಳಂ ವಿಭಾಗ ಸಮಿತಿಯ ಡೆಪ್ಯುಟಿ ಕಮಾಂಡರ್ ಅರುಣಾ ಎಂಬಾಕೆಯ ಇತ್ತೀಚಿನ ಭಾವ ಚಿತ್ರಗಳು ಪೊಲೀಸರಿಗೆ ಲಭಿಸಿವೆ.
ಪೊಲೀಸರೀಗ ಆ ಭಾವಚಿತ್ರದ ಭಿತ್ತಿ ಪತ್ರಗಳನ್ನು ತಯಾರಿಸಿ, ತಮ್ಮ ವ್ಯಾಪ್ತಿಯ ಪ್ರದೇಶದಲ್ಲೆಲ್ಲ ಅಂಟಿಸಿದೆ. ಅದರಿಂದ ಕೊನೆಗಾದರೂ ತಲೆ ಮರೆಸಿಕೊಂಡಿರುವ ನಕ್ಸಲ್ ನಾಯಕ ಹಾಗೂ ಆತನ ಪತ್ನಿಯ ಬಂಧನ ಸಾಧ್ಯವಾಗಬಹುದೆಂಬುದು ಅವರ ಆಶಾವಾದವಾಗಿದೆ.
ಚಲಪತಿಯ ತಲೆಗೆ ರೂ. 20 ಲಕ್ಷ ಹಾಗೂ ಅರುಣಾಳ ತಲೆಗೆ ರೂ. 5 ಲಕ್ಷ ಬಹುಮಾನವನ್ನು ಘೋಷಿಸಲಾಗಿದೆ. ಪೂರ್ವ ವಿಭಾಗದ ಕಾರ್ಯದರ್ಶಿಯಾಗಿ, ವಿಶಾಖಪಟ್ಟಣ ಹಾಗೂ ಪೂರ್ವ ಗೋದಾವರಿಗಳನ್ನೊಳಗೊಂಡ ಈ ವಿಭಾಗಕ್ಕೆ ಚಲಪತಿ ಅತ್ಯುನ್ನತ ನಾಯಕನಾಗಿದ್ದಾನೆ.
ಅರುಣಾಳ ಸೋದರ ಆಝಾದ್ ಹಾಗೂ ಇತರ ಇಬ್ಬರು ನಕ್ಸಲರನ್ನು ವಿಶಾಖಪಟ್ಟಣ ಜಿಲ್ಲೆಯ ಕೊಯ್ಯೂರು ಮಂಡಲದ ಮರ್ರಿ ಪಾಕುಲುವಿನಲ್ಲಿ ಮೇ 4ರಂದು ಗ್ರೇಹೌಂಡ್ ಸಿಬ್ಬಂದಿಯೊಂದಿಗೆ ನಡೆದ ಕಾಳಗದ ವೇಳೆ ಕೊಲ್ಲಲಾಗಿತ್ತು. ಸ್ಥಳದಿಂದ ಶಸ್ತ್ರಾಸ್ತ್ರಗಳು, ಒಂದು ಕಿಟ್ ಬ್ಯಾಗ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿತ್ತು. ಅದು ಆಝಾದ್‌ಗೆ ಸೇರಿದುದೆಂದು ಪರಿಶೀಲನೆಯಿಂದ ತಿಳಿದುಬಂದಿತ್ತು. ಅದರಲ್ಲಿ ಚಲಪತಿ ಹಾಗೂ ಅರುಣಾರ ಭಾವಚಿತ್ರವಿತ್ತು. ಅದು ಸ್ಮಾರ್ಟ್ ಫೋನ್‌ನಿಂದ ತೆಗೆಯಲಾಗಿದ್ದು, ಬಹುಶಃ ಆಝಾದ್‌ನೇ ತೆಗೆದಿರಬೇಕು. ಚಲಪತಿ 50ರ ಹರೆಯದವನಂತೆ ಹಾಗೂ ಅರುಣಾ 40ರ ಹರೆಯದವಳಂತೆ ಕಾಣಿಸುತ್ತಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.





