ಒರ್ಲಾಂಡೊ ದುರಂತ ತಂದೊಡ್ಡಿದ ಅನಪೇಕ್ಷಿತ ಸವಾಲುಗಳು
ಅಮೆರಿಕಾದ ಖ್ಯಾತ ವಿದ್ವಾಂಸ ಹಂಝಾ ಯೂಸುಫ್

ಶತಮಾನದ ಹೀರೋ ಮುಹಮ್ಮದ್ ಅಲಿ ಅವರ ಮರಣ, ಅಂತ್ಯ ಸಂಸ್ಕಾರ ಮತ್ತು ಈ ಮಧ್ಯೆ ನಡೆದ ಚರ್ಚೆ, ಸಂವಾದಗಳು, ಸಮಾರಂಭಗಳು ಹಾಗೂ ಸಾಂಸ್ಕೃತಿಕ ವಿನಿಮಯಗಳು ಅಮೆರಿಕಾದ ಮುಸ್ಲಿಮ್ ಸಮುದಾಯದ ಆತ್ಮ ಸಮ್ಮಾನವನ್ನು ಹಾಗೂ ಅವರ ಕುರಿತಾದ ಸಾರ್ವಜನಿಕ ಪರಿಕಲ್ಪನೆಯನ್ನು ಗಣನೀಯವಾಗಿ ಸುಧಾರಿಸಿ ಬಿಟ್ಟಿದ್ದವು. ಆದರೆ ಈ ಕುರಿತು ಸಂಭ್ರಮಿಸುವುದಕ್ಕೆ ಮಾತ್ರ ಅವರಿಗೆ ಅವಕಾಶವೇ ಸಿಗಲಿಲ್ಲ. ಏಕೆಂದರೆ ಅಷ್ಟರಲ್ಲೇ ಓರ್ಲಾಂಡೋದಲ್ಲಿ ಸಲಿಂಗಕಾಮಿಗಳ ಅಡ್ಡೆಯಲ್ಲಿ ಒಂದು ಕ್ರೂರ ಸಾಮೂಹಿಕ ಹತ್ಯಾಕಾಂಡ ನಡೆಯಿತು. ೪೯ ಮಂದಿ ಹತ ರಾಗಿದ್ದರು. ೫೩ ಮಂದಿ ಗಾಯಗೊಂಡಿದ್ದರು. ಆರೋಪಿಯಾಗಿದ್ದವನು ಒಮರ್ ಮತೀನ್ ಎಂಬ ಮುಸ್ಲಿಮ್ ಹೆಸರಿನವನು ಎಂಬ ಒಂದೇ ಕಾರಣಕ್ಕಾಗಿ ಅವನ ಅಪರಾಧವನ್ನು ಸಂಪೂರ್ಣ ಮುಸ್ಲಿಮ್ ಸಮಾಜ ಮತ್ತು ಇಸ್ಲಾಮ್ ಧರ್ಮದ ಕೊರಳಿಗೆ ಕಟ್ಟುವ ವ್ಯವಸ್ಥಿತ ಶ್ರಮ ಆರಂಭವಾಯಿತು.
ಮಾಧ್ಯಮಗಳು ಹಾಗೂ ಟ್ರಂಪ್ ತಳಿಯ ಫುಡಾರಿಗಳ ಆಶೀರ್ವಾದ ದಿಂದ ಈ ಶ್ರಮ ಸಾಕಷ್ಟು ಯಶಸ್ಸನ್ನೂ ಪಡೆಯಿತು. ಮತೀನ್ ನ ಗುಂಡಿಗೆ ಬಲಿಯಾದವರಲ್ಲಿ ಮುಸ್ಲಿಮರಿದ್ದರು ಮತ್ತು ಆ ಸನ್ನಿವೇಶದಲ್ಲಿ ಸಿಕ್ಕಿ ಬಿದ್ದಿದ್ದ ಅನೇಕ ಮಂದಿಯನ್ನು ರಕ್ಷಿಸಿದ ಸಾಹಸಿಗಳಲ್ಲಿ ಮುಸ್ಲಿಮರು ಇದ್ದರು ಎಂಬಿತ್ಯಾದಿ ಅಂಶಗಳು ಗದ್ದಲದಲ್ಲಿ ಕರಗಿ ಹೋದವು. ಎಂದಿನಂತೆ ಅಪರಾಧಿ ಕಟೆಕಟೆಯಲ್ಲಿ ನಿಲ್ಲಿಸಲ್ಪಟ್ಟ ಮುಸ್ಲಿಮ್ ಸಮಾಜದ ಪರವಾಗಿ ಸುಮಾರು ಇನ್ನೂರಕ್ಕೂ ಅಧಿಕ ಹೆಚ್ಚಿನ, ಸಂಘಟನೆ ಗಳ ಪದಾಧಿಕಾರಿಗಳು, ವಿದ್ವಾಂಸರು, ಸಾಹಿತಿಗಳು ಮತ್ತು ಕಲಾವಿದರು ಒಂದು ಸವಿಸ್ತಾರ ಹೇಳಿಕೆ ಹೊರಡಿಸಿ ಪ್ರಸ್ತುತ ಕೃತ್ಯವನ್ನು ಖಂಡಿಸಿ ಇಂತಹ ಕೃತ್ಯಗಳನ್ನು ಯಾವುದೇ ಧರ್ಮ ಅಥವಾ ಸಮಾಜದ ಜೊತೆ ಜೋಡಿಸಬಾರದು ಎಂದು ಮನವಿ ಮಾಡಿದರು.
ಪ್ರಸ್ತುತ ಹೇಳಿಕೆಗೆ ಸಹಿ ಹಾಕಿದವರಲ್ಲಿ, ಪ್ರಖ್ಯಾತ ಅಮೆರಿಕನ್ ಮುಸ್ಲಿಮ್ ವಿದ್ವಾಂಸ ಶೇಕ್ ಹಂಝಾ ಯೂಸುಫ಼್ ಕೂಡ ಒಬ್ಬರು. ತಮ್ಮ ವಿದ್ವತ್ತು, ಮಾತುಗಾರಿಕೆ, ಸಂತುಲಿತ ವಿಚಾರಧಾರೆ ಮುಂತಾದ ಹಲವು ವೈಶಿಷ್ಟ್ಯಗಳಿಗಾಗಿ ಗುರುತಿಸಲ್ಪಡುವ ಶೇಕ್ ಹಂಝಾ ರನ್ನು ಬುಧವಾರ ವಾರ್ತಾ ಸಂಸ್ಥೆ ಸಿಎನ್ನೆನ್ ನವರು ಸಂದರ್ಶಿಸಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದರು. ಸಂರ್ಶನದ ಆಯ್ದ ಭಾಗ ಇಲ್ಲಿದೆ:
ಪ್ರಶ್ನೆ: ಈ ಮೊದಲು ಅನೇಕ ಬಾರಿ ಮುಸ್ಲಿಮ್ ಸಮಾಜದವರು ಭಯೋತ್ಪಾದನೆಯನ್ನು ಖಂಡಿಸಿ ಹೇಳಿಕೆ ನೀಡಿರುವುದರಿಂದ ಇನ್ನೊಂದು ಹೇಳಿಕೆಯ ಅಗತ್ಯ ಏನಿತ್ತು?
ಉತ್ತರ: ಮೊನ್ನೆ ನಡೆದಂತಹ ಘಟನೆಗಳು ನಡೆದಾಗಲೆಲ್ಲಾ ಮುಸ್ಲಿಮರು ಈ ಬಗೆಯ ಘಟನೆಗಳನ್ನು ಯಾಕೆ ಖಂಡಿಸುವುದಿಲ್ಲ ಎಂಬ ಪ್ರಶ್ನೆಯನ್ನು ಪದೇ ಪದೇ ಕೇಳಲಾಗುತ್ತದೆ. ನಿಜವಾಗಿ ಇತರರು ಏನು ಮಾಡುತ್ತಾರೆ ಎಂಬುದರ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ. ಅವರು ನನ್ನ ನ್ನು ಅಥವಾ ನನ್ನ ಧರ್ಮವನ್ನು ಪ್ರತಿನಿಧಿಸುವುದಿಲ್ಲ. ಒಂದು ಸಣ್ಣ ಪಂಥಕ್ಕೆ ಸೇರಿದ್ದ ಡೇವಿಡ್ ಕುರೇಶ್ ನ ಕೃತ್ಯಗಳನ್ನು ಯಾರೂ ಸೆವೆಂತ್ ಡೇ ಎಡ್ವೆಂಟಿಸ್ಟ್ ಪಂಗಡದ ಜೊತೆ ನಂಟು ಹಾಕುವುದಿಲ್ಲ. ಹಾಗೆಯೇ ಮೇಯಿರ್ ಕಹಾನೆಯ ಅಪರಾಧಗಳನ್ನು ಯಾರೂ ಯಹೂದಿ ಸಮುದಾಯದ ಖಾತೆಗೆ ಸೇರಿಸುವುದಿಲ್ಲ. ಆದರೆ ಇಂತಹ (ಒರ್ಲಾಂಡೊ) ದುರಂತಗಳು ನಡೆದಾಗ ಮಾತ್ರ ಸಂಪೂರ್ಣ ಇಸ್ಲಾಂ ಧರ್ಮದ ಮೇಲೆ ಕಳಂಕ ಹಚ್ಚಲಾಗುತ್ತದೆ. ನಾವು ಒಂದು ವಿಷ ಚಕ್ರದಲ್ಲಿ ಸಿಕ್ಕಿ ಕೊಂಡಿದ್ದೇವೆ. ಘಟನೆಗಳು, ಖಂಡನೆಗಳು, ಮತ್ತೆ ಘಟನೆಗಳು, ಮತ್ತೆ ಖಂಡನೆಗಳು. ಇಷ್ಟಾಗಿಯೂ ಜನರು, "ಇಂತಹದನ್ನೆಲ್ಲಾ ಮುಸ್ಲಿಮರು ಯಾಕೆ ಖಂಡಿಸುವುದಿಲ್ಲ?" ಎಂದು ಕೇಳುತ್ತಲೇ ಇರುತ್ತಾರೆ.
ಪ್ರಶ್ನೆ: ಮೊನ್ನೆ ಸೋಮವಾರ ಇಸ್ಲಾಮ್ ಧರ್ಮ ಮತ್ತು ಭಯೋತ್ಪಾದನೆಯ ಕುರಿತು ಡೊನಾಲ್ಡ್ ಟ್ರಂಪ್ ಮಾಡಿದ ಭಾಷಣದ ಬಗ್ಗೆ ನೀವು ಏನಂತೀರಿ?
ಉತ್ತರ: ಆತ ಬಹಳ ಅಪಾಯಕಾರಿಯಾದ ಆಟವೊಂದನ್ನು ಆಡುತ್ತಿದ್ದಾರೆ. ಆ ಬಗೆಯ ಹುಚ್ಚು ಮಾತು ಗಳಿಂದ ಹಲವು ಜೀವಗಳನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. ನಾವೀಗ ಅತ್ಯಂತ ಸ್ಫೊಟಕ ಸನ್ನಿವೇಶ ವೊಂದರಲ್ಲಿದ್ದೇವೆ. ಸಾಮಾಜಿಕ ಮಾಧ್ಯಮಗಳು ನಮಗೆ ಸಂಪೂರ್ಣ ಅರ್ಥವಾಗದಂತಹ, ಈವರೆಗೆ ಕಂಡರಿಯದ ಹೊಸ ಅಂಶವೊಂದನ್ನು ಇದಕ್ಕೆ ಸೇರಿಸಿವೆ.
ಪ್ರಶ್ನೆ: ಒರ್ಲಾಂಡೊ ತರಹದ ದುರಂತಗಳನ್ನು ತೀವ್ರವಾದಿ ಇಸ್ಲಾಂಗೆ ಸಂಬಂಧಿಸಿದ ಘಟನೆ ಎಂದು ಹೆಸರಿಸಬೇಕೆ, ಬೇಡವೇ ಎಂಬ ಕುರಿತು ಟ್ರಂಪ್ ಮತ್ತು ಒಬಾಮ ನಡುವೆ ವಾಗ್ವಾದ ನಡೆಯುತ್ತಿದೆಯಲ್ಲಾ?
ಒಬ್ಬ ವ್ಯಕ್ತಿ ನಮ್ಮ ಆಂತರಿಕ ಕಂದಾಯ ವಿಭಾಗ (ಐ ಆರ್ ಎಸ್) ವಿರುದ್ಧ ರಾಜಕೀಯ ಹೇಳಿಕೆಯೊಂದನ್ನು ಬರೆದು ಅದರ ಕಚೇರಿಯೊಳಕ್ಕೆ ವಿಮಾನ ಹಾರಿಸಿದಾಗ ಅದೊಂದು ಸ್ಪಷ್ಟ ರಾಜಕೀಯ ಕೃತ್ಯ ವಾಗಿದ್ದರೂ ಆ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಸಾರಲಾಯಿತು. ಇಲ್ಲಿ ಒಂದು ದ್ವಂದ್ವ ಎದ್ದು ಕಾಣುತ್ತಿದೆ. ಒಬ್ಬ ವ್ಯಕ್ತಿಯ ಹೆಸರು ಮುಹಮ್ಮದ್ ಎಂದಾಗಿದ್ದರೆ ಅವನ ಕೃತ್ಯವು ತನ್ನಿಂತಾನೆ ಭಯೋತ್ಪಾದನೆ ಎನಿಸಿ ಕೊಳ್ಳುತ್ತದೆ. ಈ ವ್ಯಕ್ತಿ (ಒಮರ್ ಮತೀನ್) ಒಬ್ಬ ಮುಸ್ಲಿಮ್ ತೀವ್ರವಾದಿಯಾಗಿರಲಿಲ್ಲ. ಇಸ್ಲಾಮ್ ಧರ್ಮದಲ್ಲಿ ಮದ್ಯ ಪಾನ ಮಾಡುವುದು, ಸಲಿಂಗ ಕಾಮಿಗಳ ಬಾರ್ ಗೆ ಹೋಗುವುದು ಮಾತ್ರವಲ್ಲ ಯಾವುದೆ ತರಹದ ಬಾರ್ ಗೆ ಹೋಗುವುದು ನಿಷಿಧ್ಧ ವಾಗಿದೆ. ಆತ ಕೇವಲ ಹೆಸರಿಗೆ ಮಾತ್ರ ಒಬ್ಬ ಮುಸ್ಲಿಮನಾಗಿದ್ದ. ಆತ ಎಂದಾದರೂ ಮಸೀದಿಗೆ ಹೋಗಿರಬಹುದು. ಆದರೆ, ಆತನಲ್ಲಿ ಯಾವುದೇ ಮಟ್ಟದ ಧಾರ್ಮಿಕತೆ ಇತ್ತು ಎಂದು ನನಗೆ ಅನಿಸುವುದಿಲ್ಲ.
ಪ್ರಶ್ನೆ: ಪ್ರಧಾನ ಧಾರೆಯ ಮುಸ್ಲಿಮರು ತಮ್ಮನ್ನು ಅಪರಾಧಿಗಳಾಗಿ ಕಾಣುತ್ತಿದ್ದಾರೆ ಎಂದು ಭಾವಿಸುತ್ತಿರಬಹುದಾದ ಸಲಿಂಗ ಕಾಮಿಗಳು ಹಾಗೂ ಮುಸ್ಲಿಮ್ ಸಲಿಂಗ ಕಾಮಿಗಳ ಸ್ಥಿತಿ ಏನು?
ನಮ್ಮ ಒರ್ಲಾಂಡೊ ಹೇಳಿಕೆಯಲ್ಲಿ ನಾವು ಸ್ಪಷ್ಟ ಪಡಿಸಿರುವಂತೆ ನಾವು ಅಬ್ರಹಾಮಿಕ್ ನೈತಿಕ ಮೌಲ್ಯ ಗಳಿಗೆ ಬದ್ಧರಾಗಿದ್ದೇವೆ. ಆದರೆ ಅದನ್ನು ಬಲವಂತವಾಗಿ ಯಾರ ಮೇಲೂ ಹೇರ ಬಾರದು. ಅಮೇರಿಕ ಎಂಬುದು ಆಯ್ಕೆಯ ನಾಡು. ಅದು ವಿವಿಧ ಬಗೆಯ ನಿರ್ದಿಷ್ಟ ಜೇವನ ಶೈಲಿಗಳನ್ನು ಅನುಸರಿಸುವವರಿಗೆ ಅನ್ವಯ ವಾಗುತ್ತದೆ. " ಧರ್ಮದ ವಿಷಯದಲ್ಲಿ ಯಾವುದೇ ಬಲವಂತಕ್ಕೆ ಖಂಡಿತ ಅವಕಾಶವಿಲ್ಲ" ಎಂದು ಕುರ್ ಆನ್ ನಲ್ಲಿ ಸಾರಲಾಗಿದೆ.
ಪ್ರಶ್ನೆ: ಹಾಗಾದರೆ ಸಲಿಂಗಕಾಮಿ ಮುಸ್ಲಿಮರ ವಿಷಯ?
ಉತ್ತರ: ನೋಡಿ, ಪೋಪರು ಹೊರಡಿಸುವ ತರಹದ ಫರ್ಮಾನುಗಳನ್ನು ಹೊರಡಿಸುವ ಅಧಿಕಾರ ನನಗಿಲ್ಲ. ನಮ್ಮ ಪರಂಪರೆಯಲ್ಲಿ ಅಂತಹ ಒಂದು ಸಾಂಸ್ಥಿಕ ಏರ್ಪಾಡು ಕೂಡಾ ಇಲ್ಲ. ಆದರೆ ನಾನು ನಮ್ಮ ಪರಂಪರೆಯ ಕುರಿತು ಅಧ್ಯಯನ ನಡೆಸಿದ್ದೇನೆ. ಮುಸ್ಲಿಮ್ ಸಮಾಜದ ಹೆಚ್ಚಿನವರು ಒಂದು ಸಕ್ರಿಯ ಸಲಿಂಗ ಕಾಮಿ ಜೀವನ ಶೈಲಿಗೆ ಮಾನ್ಯತೆ ನೀಡುವ ಸಾಧ್ಯತೆ ಎಂದೆಂದಿಗೂ ಇಲ್ಲ. ನನಗೆ ಅಂತಹ ಸಾಧ್ಯತೆ ಎಲ್ಲೂ ಕಾಣಿಸುವುದಿಲ್ಲ. ಆದರೆ ಅದೇ ವೇಳೆ ವ್ಯಕ್ತಿಗಳು ಕಾನೂನು ನಿಯಮಗಳನ್ನು ಸ್ವತಃ ಕೈಗೆತ್ತಿಕೊಂಡು ಧರ್ಮದ ಕುರಿತಾದ ತಮ್ಮ ದೃಷ್ಟಿ ಕೋನವನ್ನು ಇನ್ನೊಬ್ಬರ ಮೇಲೆ ಹೇರಲು ಹೊರಡುವುದನ್ನು ಸಮರ್ಥಿಸುವ ಅಂಶವೂ ನಮ್ಮ ಪರಂಪರೆಯಲ್ಲಿಲ್ಲ.
ಪ್ರಶ್ನೆ; ಸಲಿಂಗ ಕಾಮದ ಕುರಿತಾಗಿರುವ ಇಸ್ಲಾಮ್ ಧರ್ಮದ ನಿಯಮಗಳು ಬದಲಾಗಲು ಸಾಧ್ಯ ವಿಲ್ಲವೇ? ಸಾಕ್ಷಾತ್ ದೇವ ವಾಕ್ಯ ಎಂದು ನಂಬಲಾಗಿರುವ ಕುರ್ ಆನ್ ಅದನ್ನು ಖಂಡಿಸುತ್ತದೆ ಎಂಬುದು ಇದಕ್ಕೆ ಕಾರಣವೇ?
ಉತ್ತರ; ಕುರ್ ಆನ್ ಅಂತೂ ಈ ಕೃತ್ಯವನ್ನು ಬಹಳಷ್ಟು ಸ್ಪಷ್ಟವಾಗಿ ಖಂಡಿಸಿದೆ. ಹಾಗೆಯೇ ನಮ್ಮ ಕಾನೂನು ವ್ಯವಸ್ಥೆಯಲ್ಲಿ ಇದನ್ನು ಒಂದು ಅಕ್ರಮ ಚಟುವಟಿಕೆ ಎಂದು ಪರಿಗಣಿಸಿರುವ ಒಂದು ದೀರ್ಘ ಪರಂಪರೆಯೇ ಇದೆ. ಅದೇ ವೇಳೆ ಈ ತರಹದ ಒಲವು ಇರುವವರು ನೇರವಾಗಿ ಸಲಿಂಗ ಕಾಮದಲ್ಲಿ ತೊಡಗುವುದನ್ನು ತಪ್ಪಿಸಲು ಅನುಸರಿಸ ಬಹುದಾದ ಪರ್ಯಾಯ ಉಪಾಯಗಳ ಕುರಿತು ಫತ್ವಾಗಳಿವೆ. ಕೆಲವರ ಮಟ್ಟಿಗೆ ಇದೊಂದು ಪ್ರಕೃತಿ ದತ್ತ ಅಸಹಾಯಕತೆಯಾಗಿದೆ ಎಂಬ ಕುರಿತಂತೆ ಜಾಗೃತಿ ಬೆಳೆಯುತ್ತಿದೆ. ಈ ಸಂಕಟ ಅನುಭವಿಸುತ್ತಿರುವವರ ಕುರಿತು ನನಗೆ ಖಂಡಿತಾ ಸಹಾನುಭೂತಿ ಇದೆ. ನಾನು ಈ ತರಹದ ಸಂಕಟದಲ್ಲಿ ಸಿಕ್ಕಿರುವ ಯುವಕರ ಜತೆ ಮಾತನಾಡಿದ್ದೇನೆ. ಆದರೆ ನನಗೆ ಅನಿಸುವಂತೆ ಅವರಿಗೆ ಅಗತ್ಯವಿರುವುದು ನಮ್ಮ ಸಹಾನುಭೂತಿಯಲ್ಲ. ಅವರ ಜೀವನ ಶೈಲಿಯನ್ನು ನಾವು ಪೂರ್ಣ ಪ್ರಮಾಣದಲ್ಲಿ ಅಂಗೀಕರಿಸ ಬೇಕು ಎಂಬುದು ಅವರ ಬೇಡಿಕೆಯಾಗಿದೆ. ಆದರೆ ಅದನ್ನು ಅಂಗೀಕರಿಸಲು ನನ್ನ ಧರ್ಮವು ಖಂಡಿತಾ ನನಗೆ ಅನುಮತಿ ನೀಡುವುದಿಲ್ಲ. ಹಾಗೆಂದು, ನಾನು ನನ್ನ ನಂಬಿಕೆಯನ್ನು ಅವರ ಮೇಲೆ ಹೇರುವ ಹಾಗಿಲ್ಲ. ನಾನು ಖಂಡಿತಾ ಹಾಗೆ ಮಾಡಲಾರೆ.
ಪ್ರಶ್ನೆ: ಸಲಿಂಗ ಕಾಮಿಗಳು ನಿಮ್ಮೊಡನೆ ತಮ್ಮ ಸಂಕಟಗಳ ಕುರಿತು ಹೇಳಿ ಕೊಂಡಾಗ ನೀವು ಅವರಿಗೆ ಏನು ಹೇಳುತ್ತೀರಿ?
ಉತ್ತರ: ನಾನು ಹೇಳುವುದಿಷ್ಟೇ . ನಾನು ನಿಮ್ಮ ಅನುಭವವನ್ನು ಅಲ್ಲಗಳೆಯುವುದಿಲ್ಲ. ಆದರೆ ನೀವು ಧರ್ಮದಲ್ಲಿ ಅನುಮತಿಸಲಾಗಿರುವ ವ್ಯಾಪ್ತಿಯನ್ನು ಮೀರಿ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ. ಅವಿವಾಹಿತರಾಗಿ ಉಳಿಯುವುದಕ್ಕೆ ಅವಕಾಶವಿದೆ. ಸ್ವತಹ ನಾನು ಹಲವು ವರ್ಷಗಳ ಕಾಲ ಅವಿವಾಹಿತ ನಾಗಿದ್ದೆ.
ಪ್ರಶ್ನೆ: ಇಸ್ಲಾಮಿ ಕರ್ಮ ಶಾಸ್ತ್ರದ ಕೆಲವು ಧಾರೆಗಳಲ್ಲಿ ಸಲಿಂಗಕಾಮಕ್ಕೆ ಬಹಳ ಉಗ್ರ ಶಿಕ್ಷೆ ವಿಧಿಸಲಾಗಿದೆಯಲ್ಲಾ?
ಉತ್ತರ: ಇಸ್ಲಾಮಿ ಕರ್ಮ ಶಾಸ್ತ್ರದ ಗ್ರಂಥಗಳಲ್ಲಿ ವಸ್ತುತಃ ಸಲಿಂಗ ಕಾಮಕ್ಕೆಂದು ನಿರ್ದಿಷ್ಟ ಶಿಕ್ಷೆಯನ್ನು ವಿಧಿಸಲಾಗಿಲ್ಲ. ಸ್ತ್ರೀ ಪುರುಷರ ನಡುವಣ ವ್ಯಭಿಚಾರವೂ ಸೇರಿದಂತೆ ಅಕ್ರಮ ಲೈಂಗಿಕ ಸಂಬಂಧಕ್ಕೆ ಬಹಳ ಉಗ್ರ ಶಿಕ್ಷೆಯನ್ನು ವಿಧಿಸಲಾಗಿದೆ. ಆದರೆ ಈ ವಿಷಯದಲ್ಲಿ ಅಪರಾಧವನ್ನು ಸಾಬೀತು ಪಡಿಸುವುದು ಬಹುತೇಕ ಅಸಾಧ್ಯ. ಲೈಂಗಿಕ ಪ್ರವೇಶವನ್ನು ಕಣ್ಣಾರೆ ಕಂಡ ನಾಲ್ಕು ಮಂದಿ ಸಾಕ್ಷಿಗಳನ್ನು ತರಬೇಕಾಗುತ್ತದೆ. ಅದನ್ನು ಎಲ್ಲಿಂದ ತಾನೇ ತರಲು ಸಾಧ್ಯ?
ಪ್ರಶ್ನೆ: ಮುಹಮ್ಮದ್ ಅಲಿ ಅವರ ಅಂತ್ಯ ಸಂಸ್ಕಾರದ ಸಮಾರಂಭದಲ್ಲಿ ನೀವು ಭಾಗವಹಿಸಿದ್ದಿರಿ. ಮುಹಮ್ಮದ್ ಅಲಿ ಹೆಸರಲ್ಲಿ ನಿರ್ಮಾಣವಾಗಿದ್ದ ಸದಭಿಪ್ರಾಯವು ಇದೀಗ ಒರ್ಲಾಂಡೊ ಘಟನೆಯಿಂದಾಗಿ ಮಾಸಿ ಹೊಗಿದೆ ಎಂದು ನಿಮಗೆ ಅನಿಸುತ್ತದೆಯೇ?
ಉತ್ತರ: ಈ ವಿಷಯವನ್ನು ಡಾ.ಶೆರ್ಮನ್ ಜಾಕ್ಸನ್ ಅವರು ಬಹಳ ಚೆನ್ನಾಗಿ ವಿವರಿಸಿದ್ದಾರೆ. ನೀವು ಏಕ ಕಾಲದಲ್ಲಿ ಮುಸ್ಲಿಮ್ ಮತ್ತು ಅಮೇರಿಕನ್ ಆಗಿರಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ಮುಹಮ್ಮದ್ ಅಲಿ ಕೊನೆಗಾಣಿಸಿದರು. ತಮ್ಮ ಅಂತ್ಯ ಸಂಸ್ಕಾರದ ಕಾರ್ಯಕ್ರಮವನ್ನು ಸ್ವತಃ ಮುಹಮ್ಮದ್ ಅಲಿ ಅವರೇ ರೂಪಿಸಿದ್ದರು. ಅವರ ಯೋಜನೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಅವರ ನಂಬಿಕೆಯನ್ನು ಎತ್ತಿ ಹಿಡಿಯುವ ಮತ್ತು ಅನ್ಯ ನಂಬಿಕೆಗಳ ಜನರನ್ನೂ ಸಹಭಾಗಿಗಳಾಗಿಸುವ ಅಂಶಗಳನ್ನು ಗಮನಿಸಿ ನಾನು ಪ್ರಭಾವಿತನಾಗಿದ್ದೆ. ಎರಡು ದಿನಗಳ ಮಟ್ಟಿಗೆ ಪ್ರೀತಿಯ ವಾತಾವರಣವು ಲೂಯಿವಿಲ್ಲಿಯನ್ನು ಸಂಪೂರ್ಣ ಆವರಿಸಿಕೊಂಡಿತ್ತು. ಪ್ರತಿಯೊಬ್ಬರೂ ನಗುನಗುತ್ತಾ, ಪರಸ್ಪರರನ್ನು ಅಪ್ಪಿ ಹಿಡಿಯುತ್ತಾ ಸ್ವಾಗತಿಸುತ್ತಿದ್ದರು. ಸಮುದಾಯದ ಪಾಲಿಗೆ ಇದೊಂದು ಪ್ರಮುಖ ಮುನ್ನಡೆಯಾಗಿತ್ತು. ಅಷ್ಟರಲ್ಲೇ ಈ ದುರಂತ ಸಂಭವಿಸಿತು. ನಾವು ಹರ್ಷದ ಲೋಕದಿಂದ ಮತ್ತೆ ಹತಾಶೆಯ ಲೋಕಕ್ಕೆ ಮರಳಿದಂತಾಯಿತು. ಒಂದು ಹೆಜ್ಜೆ ಮುಂದಕ್ಕೆ ಹೋಗಿ ಎರಡು ಹೆಜ್ಜೆ ಹಿನ್ನಡೆದಂತಾಯಿತು.