ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಮೊಬೈಲ್ ಯುನಿಟ್

ವಿಟ್ಲ, ಜೂ.17: ಡೆಂಗ್, ಮಲೇರಿಯಾ ಹಾಗೂ ಇಲಿಜ್ವರದಂತಹ ಮಾರಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಮೂರು ಮೊಬೈಲ್ ಯುನಿಟ್‌ಗಳನ್ನು ಸ್ಥಾಪಿಸಲಾಗಿದ್ದು, ಇದು ಜಿಲ್ಲೆಯಾದ್ಯಂತ ಸಂಚರಿಸಿ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದೆ. ಇದೀಗ ಕಾರ್ಯಾರಂಭಿಸಿರುವ ಮೊಬೈಲ್ ಯುನಿಟ್ ತಂಡವನ್ನು ತುರ್ತಾಗಿ ಬಂಟ್ವಾಳಕ್ಕೆ ಕರೆಸಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಹೇಳಿದ್ದಾರೆ.
ತಾಲೂಕಿನಲ್ಲಿ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಗುರುವಾರ ಸಚಿವ ರಮಾನಾಥ ರೈ ಕರೆದ ವಿಶೇಷ ಸಭೆಯಲ್ಲಿ ಸಚಿವರಿಗೆ ಸ್ಪಷ್ಟನೆ ನೀಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ 157 ಶಂಕಿತ ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 30 ಪ್ರಕರಣಗಳು ದೃಢಪಟ್ಟಿವೆ. ಗೋಳ್ತಮಜಲು ಗ್ರಾಮದ ನೆಟ್ಲ ಎಂಬಲ್ಲಿ ಸುಮಾರು 32 ಶಂಕಿತ ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 11 ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ ಒಂದು ಇಲಿಜ್ವರ ಪ್ರಕರಣವೂ ಒಳಗೊಂಡಿದೆ. ಸಮಗ್ರ ಜಿಲ್ಲೆಗೆ ಹೋಲಿಸಿದರೆ ಬಂಟ್ವಾಳದಲ್ಲಿ ಸಾಂಕ್ರಾಮಿಕ ರೋಗ ಪ್ರಕರಣಗಳು ಬಹಳಷ್ಟು ನಿಯಂತ್ರಣದಲ್ಲಿದೆ ಎಂದರು.
ಸಾಂಕ್ರಾಮಿಕ ರೋಗ ಪ್ರಕರಣಗಳು ಕಂಡು ಬಂದ ತಾಲೂಕಿನ ಎಲ್ಲ ಕಡೆಗಳಲ್ಲಿಯೂ ಈಗಾಗಲೇ ಫಾಗಿಂಗ್ ನಡೆಸಲಾಗಿದ್ದು, ಕರಪತ್ರ ಸಹಿತ ವಿವಿಧ ರೀತಿಯ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ ಎಂದ ಆರೋಗ್ಯಾಧಿಕಾರಿ, ಈ ಬಾರಿ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಮಕ್ಕೆ ಆರೋಗ್ಯ ಇಲಾಖೆ ಸ್ಥಳೀಯಾಡಳಿತ ಹಾಗೂ ಸಾರ್ವಜನಿಕರನ್ನು ಸೇರಿಸಿಕೊಂಡು ನಡೆಸುತ್ತಿದೆ ಎಂದರು.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅತ್ಯಗತ್ಯ ಎಂದ ಅವರು, ಸೊಳ್ಳೆ ಉತ್ಪತ್ತಿಯನ್ನು ತಡೆಯುವುದು ಹಾಗೂ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದರಿಂದ ತಡೆಯುವುದು ಅತೀ ಅಗತ್ಯವಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವ ರಮಾನಾಥ ರೈ, ತಾಲೂಕಿನಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್‌ರಿಗೆ ಸೂಚಿಸಿದರು. ಆರೋಗ್ಯಕ್ಕೆ ಸಂಬಂಧಿಸಿ ಸಮಸ್ಯೆಗಳ ಬಗ್ಗೆ ಮುಂದಿನ ಜಿಲ್ಲಾ ಕೆಡಿಪಿ ಸಭೆಯಲ್ಲೂ ಉನ್ನತ ಅಧಿಕಾರಿಗಳ ಜೊತೆ ಗಂಭೀರ ಚರ್ಚೆ ನಡೆಸುವುದಾಗಿ ಸಚಿವರು ತಿಳಿಸಿದರು.







