ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ: ರವೀಶ್ ಎಸ್.ಬಿ. ರಾಜ್ಯಕ್ಕೆ ಟಾಪರ್

ಮಂಗಳೂರು,ಜೂ.17: ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಬೋರ್ಡ್ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಮಂಗಳೂರು ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸಸ್‌ನ ರಜಾ ಅವಧಿಯ ಕೋಚಿಂಗ್ ವಿದ್ಯಾರ್ಥಿ ರವೀಶ್ ಎಸ್.ಬಿ. ಒಟ್ಟು 597 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಬಳ್ಳಾಲ್ ಹೆಚ್ಚುವರಿ 6 ಅಂಕಗಳೊಂದಿಗೆ ಒಟ್ಟು 596 ಅಂಕಗಳನ್ನು ಗಳಿಸುವ ಮೂಲಕ ಶಿಕ್ಷಣ ಸಂಸ್ಥೆಯು ಪ್ರಥಮ 10ರಲ್ಲಿ 2 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಉಷಾ ಪ್ರಭಾ ನಾಯಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪದವಿ ಪೂರ್ವ ಪರೀಕ್ಷೆಯಲ್ಲಿ ವೈಷ್ಣವಿ ಬಳ್ಳಾಲ್ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಸಂಸ್ಕೃತದಲ್ಲಿ ತಲಾ 100 ಅಂಕ ಹಾಗೂ ಆಂಗ್ಲ ಭಾಷೆಯಲ್ಲಿ 90 ಅಂಕಗಳನ್ನು ಪಡೆದಿದ್ದರು. ಈ ಬಗ್ಗೆ ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇಂಗ್ಲಿಷ್‌ನಲ್ಲಿ ಆರು ಅಂಕಗಳು ಹೆಚ್ಚುವರಿಯಾಗಿ ಬಂದ ಕಾರಣ ವೈಷ್ಣವಿ 600ರಲ್ಲಿ 596 ಅಂಕಗಳನ್ನು ಪಡೆದಂತಾಗಿದೆ. ದೇಶದ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು ನಡೆಸಿದ ಅಖಿಲ ಭಾರತೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ವೈಷ್ಣವಿ ಬಳ್ಳಾಲ್ 242ನೆ ರ್ಯಾಂಕ್ ಪಡೆದಿದ್ದರು. ಇದಲ್ಲದೆ ಸಿಇಟಿ ಪರೀಕ್ಷೆಯಲ್ಲಿ ಐಎಸ್‌ಎಂಎಚ್‌ನಲ್ಲಿ 7, ಕೃಷಿಯಲ್ಲಿ 5, ಮೆಡಿಕಲ್‌ನಲ್ಲಿ 22, ಇಂಜಿನಿಯರಿಂಗ್‌ನಲ್ಲಿ 19, ಪಶು ವೈದ್ಯಕೀಯದಲ್ಲಿ 22, ಬಿ. ಫಾರ್ಮಾದಲ್ಲಿ 64ನೆ ರ್ಯಾಂಕ್ ಪಡೆದಿದ್ದರು.

ಹೆಣ್ಣು ಮಕ್ಕಳಿಗೆ ಕಷ್ಟವೆನ್ನುವ ನ್ಯೂರೋ ಸರ್ಜನ್ ಆಗಬೇಕೆಂಬುದೇ ನನ್ನ ಇಚ್ಛೆ
ನನಗೆ ಆಂಗ್ಲ ಭಾಷೆಯಲ್ಲಿ ಇನ್ನೂ ಹೆಚ್ಚಿನ ಅಂಕ ಪಡೆಯಬಹುದೆಂಬ ನಿರೀಕ್ಷೆ ಇತ್ತು. ಆ ಹಿನ್ನೆಲೆಯಲ್ಲೇ ಶಿಕ್ಷಕರ ಮಾರ್ಗದರ್ಶನದ ಮೇರೆಗೆ ಮರು ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದೀಗ ಹೆಚ್ಚುವರಿಯಾಗಿ ಆರು ಅಂಕ ದೊರಕಿದೆ. ಯಾವುದೇ ಗ್ರಾಮರ್ ತಪ್ಪು ಆಗದಿದ್ದರೂ ಕೆಲವು ಕಡೆ ಅಂಕಗಳನ್ನು ಕಡಿತ ಮಾಡಲಾಗಿತ್ತು. ಇದೀಗ ಸರಿಪಡಿಸಲಾಗಿದೆ. ಇದು ಸಂತಸ ತಂದಿದೆ ಎಂದು ವೈಷ್ಣವಿ ಬಲ್ಲಾಳ್ ಹೇಳಿದರು. ಹೆಣ್ಣು ಮಕ್ಕಳು ನ್ಯೂರೋ ಸರ್ಜನ್ ಆದರೆ ಅವರಿಗೆ ಕುಟುಂಬ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಆ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಬೇಕೆಂಬುದು ನನ್ನ ಇಚ್ಛೆ ಎಂದು ವೈಷ್ಣವಿ ಭವಿಷ್ಯದ ಕನಸಿನ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ವೈಷ್ಣವಿಯವರ ಹೆತ್ತವರಾದ ಡಾ. ರಾಜೇಶ್ ಬಳ್ಳಾಲ್ ಹಾಗೂ ವಸುಂಧರಾ ಬಳ್ಳಾಲ್, ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಉಪಸ್ಥಿತರಿದ್ದರು.







