ಪರಿಸರದ ಬಗ್ಗೆ ಆಳ ತಿಳುವಳಿಕೆ ಇರುವ ಬುದ್ಧಿಜೀವಿಗಳ ಅಗತ್ಯವಿದೆ: ಸಚಿವ ರಮಾನಾಥ ರೈ

ಮಂಗಳೂರು, ಜೂ.17:ರಾಜಕಿಯ ಪ್ರೇರಿತ ಪರಿಸರವಾದಿಗಳಿಗಿಂತ, ಪರಿಸರದ ಬಗ್ಗೆ ಆಳವಾಗಿ ತಿಳುವಳಿಕೆ ಇರುವ ಬುದ್ದಿಜೀವಿಗಳ ಅಗತ್ಯವಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ನಗರದ ಪುರಭವನದಲ್ಲಿ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಜಾಥ, ಪರಿಸರ ಮಾದರಿಗಳ ಪ್ರದರ್ಶನ ಮತ್ತು ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ನಮಗೆ ನೈಜ ಪರಿಸರವಾದಿಗಳ ಅಗತ್ಯವಿದೆ. ಪರಿಸರದ ಅವಶ್ಯಕತೆ ನಮಗಿದ್ದು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯು ನಮ್ಮ ಮೇಲಿದೆ ಎಂದರು.
ಜಾಗತಿಕ ತಾಪಮಾನ ಜಾಸ್ತಿಯಾಗುತ್ತಿದ್ದು ಪ್ರಾಕೃತಿಕ ಸಮತೋಲನವನ್ನು ಕಾಪಾಡುವಲ್ಲಿ ವಿಫಲರಾಗಿದ್ದೇವೆ. ಇದನ್ನು ಸರಿಪಡಿಸುವಲ್ಲಿ ಸಮಯವಿನ್ನು ಮೀರಿಲ್ಲ. ಇನ್ನಾದರೂ ದೃಢ ಹೆಜ್ಜೆಯನ್ನಿಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೀತ್ ಮಿಲಾನ್ ಎಂಬವರಿಗೆ ಜಿಲ್ಲಾ ಪರಿಸರ ಪ್ರಶಸ್ತಿ ಪ್ರದಾನಗೈಯ್ಯಲಾಯಿತು. ಇದೇ ವೇಳೆ ವಿವಿಧ ಸಂಸ್ಥೆಗಳಿಗೆ ಉತ್ಕೃಷ್ಟ ಪರಿಸರ ಸೇವೆಗೆ , ಉದ್ಯಮ ತಾಂತ್ರಿಕತೆ ಅಳವಡಿಸಿರುವ ಉದ್ದಿಮೆಗಳಿಗೆ , ಉದ್ದಿಮೆಗಳಿಂದ ಉತ್ತಮ ಹಸಿರು ವಲಯ ಅಭಿವೃದ್ದಿಗೆ , ಶಾಲೆಗಳಲ್ಲಿ ಉದ್ದಿಮೆಗಳಿಂದ ಹಸಿರು ಘೋಷಣೆ, ಉತ್ತಮ ಘನ ತ್ಯಾಜ್ಯ ನಿರ್ವಹಣೆಗೆ ಪುರಸಭೆ, ಗ್ರಾಮಪಂಚಾಯತ್ ಮತ್ತು ವಾರ್ಡ್‌ಗಳಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉತ್ತಮ ಪರಿಸರ ನಿರ್ವಹಣೆಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಮೊಯ್ದಿನ್ ಬಾವ, ದ.ಕ ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ದ.ಕ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಮಂಗಳೂರು ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜೂರ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಎನ್.ಐ.ಟಿ.ಕೆ ಸುರತ್ಕಲ್ ಪ್ರಾಧ್ಯಾಪಕ ಡಾ.ಜಿ.ಶೀನಿಕೇತನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯ ಪರಿಸರ ಅಧಿಕಾರಿ ಎಸ್.ನಂದಕುಮಾರ್, ಡಾ.ಶಿವರಾಮ್ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ್ ಶರ್ಮ, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ವಿಭಾಗಾಧಿಕಾರಿ ರಾಜಶೇಖರ್ ಪುರಾಣಿಕ್, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.







