ಸನತ್ ಕುಮಾರ್ ಬೆಳಗಲಿಯವರಿಗೆ ‘ಟಿಎಸ್ಸಾರ್’ ಪ್ರಶಸ್ತಿ

ಬೆಂಗಳೂರು, ಜೂ. 17: ರಾಜ್ಯ ಸರಕಾರದಿಂದ ನೀಡುವ ಪ್ರತಿಷ್ಠಿತ ಟಿ.ಎಸ್. ರಾಮಚಂದ್ರರಾವ್(ಟಿಎಸ್‌ಆರ್) ಸ್ಮಾರಕ ಪ್ರಶಸ್ತಿಗೆ ‘ವಾರ್ತಾ ಭಾರತಿ’ ಪತ್ರಿಕೆಯ ಖ್ಯಾತ ಅಂಕಣಕಾರ ಹಾಗೂ ಹಿರಿಯ ಪತ್ರಕರ್ತ ಸನತ್‌ಕುಮಾರ್ ಬೆಳಗಲಿ ಆಯ್ಕೆಯಾಗಿದ್ದಾರೆ.
2015ನೆ ಸಾಲಿನ ಟಿಎಸ್‌ಆರ್ ಪ್ರಶಸ್ತಿಗೆ ಸನತ್‌ಕುಮಾರ್ ಬೆಳಗಲಿ ಅವರನ್ನು ಆಯ್ಕೆ ಮಾಡಲಾಗಿದೆ. ಸಂಯುಕ್ತ ಕರ್ನಾಟಕ, ಜನವಾಹಿನಿ, ಸೂರ್ಯೋದಯ ಹಾಗೂ ವಾರ್ತಾಭಾರತಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಸನತ್‌ಕುಮಾರ್ ಬೆಳಗಲಿ, ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ.
2014ನೆ ಸಾಲಿನ ಟಿಎಸ್‌ಆರ್ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಆಯ್ಕೆಯಾಗಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಘೋಷಿಸಿದೆ.
ಮೊಹರೆ ಹಣಮಂತರಾಯ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ರಾಯಚೂರಿನ ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜ ಸ್ವಾಮಿ (2014) ಹಾಗೂ ಈ ಸಂಜೆ ಪತ್ರಿಕೆಯ ಟಿ.ವೆಂಕಟೇಶ್(2015) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಗಿದೆ.
ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಪ್ರಶಸ್ತಿಗಳ ಆಯ್ಕೆ ಸಮಿತಿಯು ರಾಜ್ಯ ಸರಕಾರದ ಮಾರ್ಗಸೂಚಿಯನ್ವಯ ಮೇಲ್ಕಂಡವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.







