ಮಗುವೇ ಇರಲಿ, ನಾಯಿಯೇ ಇರಲಿ ಕಾರಿನೊಳಗೆ ಬಿಟ್ಟು ಹೋದರೆ ಕಾರು ನಾಶ !

ಕೆನಡಾ, ಜೂನ್ 17: ಕಾರಿನೊಳಗೆ ಮಕ್ಕಳನ್ನು ಬಿಟ್ಟು ಹೋಗುವುದರಿಂದ ಆಗುವ ಅಪಾಯದಿಂದ ರಕ್ಷಿಸಲು ಜನರು ಕಾರಿನ ಗ್ಲಾಸ್ ಒಡೆದು ಮಕ್ಕಳನ್ನು ಹೊರತೆಗೆದ ಕಥೆಗಳನ್ನು ನೀವು ಕೇಳಿರಬಹುದು, ಆದರೆ ಕಾರಿನಲ್ಲಿ ನಾಯಿಯನ್ನು ಬಿಟ್ಟು ಬಾಗಿಲು ಹಾಕಿ ಹೋದರೆ ಕೆನಡಿಯನ್ನರು ಸುಮ್ಮನಿರುವುದಿಲ್ಲ. ಶನಿವಾರದಂದು ನಾಯಿ ಕಾರಿನೊಳಗೆ ಇದೆ ಎಂದು ಕಲ್ಲಿನಿಂದ ಗುದ್ದಿ ಕಾರಿನ ಬಾಗಿಲನ್ನು ಪುಡಿಗೈಯ್ಯುವ ಒಬ್ಬ ಕೆನಡಾದ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ.ಈ ಘಟನೆ ಕೆನಡಾದ ಒಂಟಾರಿಯೋದ ಗ್ರಾಂಡ್ ಬೆಂಡಿಯಲ್ಲಿ ನಡೆದಿದೆ.
ಕಾರಿನ ಮಾಲಕ ನಾಯಿಯನ್ನು ಕಾರಿನೊಳಗೆ ಬಿಟ್ಟು ಹೋಗಿ ಐವತ್ತು ನಿಮಿಷ ಆಗಿತ್ತು. ಇನ್ನೂ ನಿಮಿಷ ಕಳೆದಿದ್ದರೆ ನಾಯಿಗೆ ಉಸಿರಾಟ ಕಷ್ಟವಾಗುತ್ತಿತ್ತು, ಅಪಾಯ ಸಂಭವಿಸಬಹುದಿತ್ತು ಎಂದು ಪ್ರತ್ಯಕ್ಷದರ್ಶಿ ವಿಲ್ ಕೋಸ್ಟ್ ಹೇಳುತ್ತಾರೆ. ಅವರು ಸಮೀಪದ ಗಾರ್ಡನ್‌ನಲ್ಲಿ ನಡೆಯುತ್ತಿದ್ದ ಒಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ ಕಾರಿನೊಳಗೆ ನಾಯಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಧ್ವನಿವರ್ಧಕದಿಂದ ಪ್ರಕಟಣೆ ಆಗಿತ್ತು, ಕೂಡಲೇ ಜಾಗೃತರಾಗಿ ನಾಯಿಯಿದ್ದ ಕಾರಿನೆಡೆಗೆ ಬಂದಿದ್ದರು. ಅಷ್ಟರಲ್ಲಿ ಗಾರ್ಡನ್‌ನಿಂದ ಒಬ್ಬ ವ್ಯಕ್ತಿ ದೊಡ್ಡ ಕಲ್ಲನ್ನು ಕಾರಿನ ಬಾಗಿಲಿಗೆ ಎತ್ತಿಹಾಕಿ ಬಾಗಿಲನ್ನುಪುಡಿಗುಟ್ಟಿ ನಾಯಿಯನ್ನು ಹೊರತೆಗೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ವಿಲ್‌ಕೋಸ್ಟ್ ಹೇಳಿದ್ದಾರೆ.
ನಂತರ ಪೊಲೀಸರನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು. ಕಾರಿನೊಳಗೆ ನಾಯಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಯುವ ದಂಪತಿಯನ್ನು ಪೊಲೀಸರು ತಡೆಹಿಡಿದ್ದಿದ್ದರು. ನಂತರ ದಂಪತಿಯನ್ನು ಗ್ರಾಂಡ್ ಬೆಂಡಿ ಪೊಲೀಸ್ ಠಾಣೆಗೆ ಕರೆದೊಯ್ದು ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆಯೇ ಹಾಗೆಯೇ ಬಿಟ್ಟಿದ್ದಾರೆಯೇ ಎಂದು ಅಧಿಕಾರಿಗಳು ತಿಳಿಸಿಲ್ಲ. ಆದರೆ ಪ್ರತಿವರ್ಷ ಹೀಗೆ ಕಾರಿನಲ್ಲಿ ನಾಯಿಗಳನ್ನು ಬಿಟ್ಟು ಹೋಗುವ ಕಾರಣದಿಂದಾಗಿ ನೂರಾರು ನಾಯಿಗಳು ಸತ್ತು ಹೋಗತ್ತವೆ ಎಂದು ವರದಿಗಳು ತಿಳಿಸಿವೆ.





