ಜಿದ್ದಾದಲ್ಲಿ ನಡೆಯದ ಮೊಬೈಲ್ ಕ್ಷೇತ್ರದ ಸೌದೀಕರಣ

ಜಿದ್ದಾ , ಜೂ. 17: ಭಾರೀ ಚರ್ಚೆಗೆ ಕಾರಣವಾಗಿದ್ದ ಮೊಬೈಲ್ ಅಂಗಡಿಗಳ ಸೌದೀಕರಣ ಜಿದ್ದಾದಲ್ಲಿ ಸಂಪೂರ್ಣ ವಿಫಲವಾಗಿರುವ ಲಕ್ಷಣ ಕಾಣುತ್ತಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ. ಜಿದ್ದಾದ ಫೆಲೆಸ್ತೀನ್ ಬೀದಿಯಲ್ಲಿರುವ ಮೊಬೈಲ್ ಅಂಗಡಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಇನ್ನೂ ವಲಸಿಗರೇ ಕಂಡು ಬರುತ್ತಿರುವುದು ಸೌದಿ ಸರಕಾರ ಮಾಡಿರುವ ನಿಯಮ ಅನುಷ್ಠಾನವಾಗಿಲ್ಲ ಎಂಬುದಕ್ಕೆ ನಿದರ್ಶನ ಎಂದು ಸ್ಥಳೀಯರು ಹೇಳಿದ್ದಾರೆ.
" ಎಲ್ಲ ಮೊಬೈಲ್ ಅಂಗಡಿಗಳಲ್ಲಿ ವಲಸಿಗರೇ ಕಂಡು ಬರುತ್ತಿದ್ದಾರೆ. ಈ ಬಗ್ಗೆ ಸಚಿವಾಲಯ ಹಾಗು ಇತರ ಸಂಬಂಧಿತರು ಯಾವುದೇ ಕ್ರಮ ಕೈಗೊಂಡ ಹಾಗೆ ಕಾಣುತ್ತಿಲ್ಲ " ಎಂದು ಗ್ರಾಹಕರು ಹೇಳಿದ್ದಾರೆ.
"ಸೌದಿ ಸರಕಾರ ಕೇವಲ ದೊಡ್ಡ ಕಂಪೆನಿಗಳನ್ನು ಮಾತ್ರ ಸೌದೀಕರಣ ಮಾಡುವತ್ತ ಗಮನ ಹರಿಸುತ್ತಿದ್ದು ಸಣ್ಣ ಅಂಗಡಿಗಳನ್ನು ಬಿಟ್ಟು ಬಿಟ್ಟಿದೆ" ಎಂದು ಮೊಬೈಲ್ ಕ್ಷೇತ್ರದ ಮಾರಾಟ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಸರಕಾರದ ವಕ್ತಾರರು ಇದನ್ನು ನಿರಾಕರಿಸಿದ್ದು, 140 ಅಧಿಕಾರಿಗಳು ಮೊಬೈಲ್ ಅಂಗಡಿಗಳಿಗೆ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.





