ಮುಂದಿನ ವಾರ ಪ್ರಧಾನಿ ಮೋದಿ ಸಂಪುಟದ ಪುನಾರಚನೆ ಸಾಧ್ಯತೆ

ಹೊಸದಿಲ್ಲಿ,ಜೂ.17: ಪ್ರಧಾನಿ ನರೇಂದ್ರ ಮೋದಿಯವರ ಸಂಪುಟ ಮುಂದಿನ ಕೆಲವು ದಿನಗಳಲ್ಲಿ ಪುನಾರಚನೆಗೊಳ್ಳುವ ದಟ್ಟ ಸಾಧ್ಯತೆಗಳಿದ್ದು, ಇದು ಉತ್ತರ ಪ್ರದೇಶದಿಂದ ಕನಿಷ್ಠ ಇಬ್ಬರು ಸಚಿವರ ನೇಮಕಕ್ಕೆ ಅವಕಾಶ ಕಲ್ಪಿಸಲಿದೆ.
ಜೂ.19-23ರ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಉಪಲಬ್ಧತೆ ಕುರಿತು ಅಧಿಕಾರಿಗಳು ರಾಷ್ಟ್ರಪತಿ ಭವನದ ಕಚೇರಿಯನ್ನು ಕೇಳಿದ್ದಾರೆಂದು ವರದಿಗಳು ತಿಳಿಸಿದ್ದು, ಇದು ಈ ಅವಧಿಯಲ್ಲಿ ಸಂಪುಟದಲ್ಲಿ ಬದಲಾವಣೆಗಳಾಗಲಿವೆ ಎಂಬ ಊಹಾಪೋಹವನ್ನು ಸೃಷ್ಟಿಸಿದೆ.
ಮೋದಿ ಸರಕಾರದಲ್ಲಿ ಬದಲಾವಣೆಗಳ ಬೆನ್ನಿಗೇ ಪಕ್ಷದಲ್ಲಿಯೂ ಬದಲಾವಣೆಗಳಾಗಲಿವೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಿಂದ ಅಪ್ನಾ ದಲ್ ಸಂಸದೆ ಅನುಪ್ರಿಯಾ ಪಟೇಲ್ ಮತ್ತು ಗೋರಖಪುರದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಅವರು ಸಚಿವ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದಾರೆನ್ನಲಾಗಿದೆ. ರಾಜಸ್ಥಾನ,ಉತ್ತರಾಖಂಡ ಮತ್ತು ಅಸ್ಸಾಮಿನಿಂದ ಕೆಲವು ಹೊಸಮುಖಗಳು ಮೋದಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿವೆ ಎಂದು ಮೂಲಗಳು ಹೇಳಿವೆ.
ಅಜಯ ತಾಮ್ಟಾ ಮತ್ತು ಭಗತ ಸಿಂಗ್ ಕೋಷಿಯಾರಿ ಅವರು ಉತ್ತರಾಖಂಡದಿಂದ ಸಂಪುಟವನ್ನು ಸೇರಲಿರುವ ಸಂಭಾವ್ಯರಾಗಿದ್ದಾರೆ. ಕೇಂದ್ರ ಸಚಿವರಾಗಿದ್ದ ಸರಬಾನಂದ ಸೋನೊವಾಲ ಅವರು ಈಗ ಅಸ್ಸಾಂ ಮುಖ್ಯಮಂತ್ರಿಯಾಗಿರುವುದರಿಂದ ಆ ರಾಜ್ಯದಿಂದ ರಾಮೇಶ್ವರ ತೇಲಿ ಅಥವ ರಮಣ ಡೇಕಾ ಅವರಿಗೆ ಅದೃಷ್ಟ ಒಲಿಯಬಹುದು
ಲೋಕಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕರಾಗಿರುವ ಅರ್ಜುನ ರಾಮ ಮೇಘ್ವಾಲ್ ಅವರು ರಾಜಸ್ಥಾನದಿಂದ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
76 ವರ್ಷ ಪ್ರಾಯದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ನಜ್ಮಾ ಹೆಫ್ತುಲ್ಲಾ ಅವರು ತನ್ನ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ ನಕ್ವಿ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಕಲ್ಪಿಸಲು ಸಂಪುಟದಿಂದ ನಿರ್ಗಮಿಸಲಿದ್ದಾರೆ ಎನ್ನಲಾಗಿದೆ.







