ಕಾಸರಗೋಡು: ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭ
.jpg)
ಕಾಸರಗೋಡು, ಜೂ.17: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲಾಗುವುದು.
ಈ ಕುರಿತು ಲೋಕೋಪಯೋಗಿ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬ್ರತೋ ಬಿಸ್ವಾಸ್ರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
110 ಹೆಕ್ಟೇರ್ ಸ್ಥಳವನ್ನು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸ್ವಾಧೀನಪಡಿಸಲಾಗುವುದು. ಇದರಲ್ಲಿ 66 ಹೆಕ್ಟೇರ್ ಸ್ಥಳ ಸ್ವಾಧೀನಕ್ಕೆ ಪ್ರಾಥಮಿಕ ಹಂತದ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 35.5 ಹೆಕ್ಟೇರ್ ಸ್ಥಳ ಸ್ವಾಧೀನಕ್ಕೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು. ಜುಲೈ 31 ರೊಳಗೆ ಸರ್ವೇ ಪೂರ್ಣಗೊಳಿಸಲಾಗುವುದು. ಶೀಘ್ರವೇ ಭೂ ಸ್ವಾಧೀನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಇ.ದೇವದಾಸನ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳಾದ ಕೆ.ವಿ. ಪ್ರಭಾಕರನ್, ಕೆ.ಅಂಬುಜಾಕ್ಷನ್, ಬಿ.ಅಬ್ದುಲ್ ನಾಸರ್, ಪ್ರಿನ್ಸ್ ಪ್ರಭಾಕರ್, ಕೆ.ವಿ. ಅಬ್ದುಲ್ಲ, ಕೆ.ಮಿನಿ ಮೊದಲಾದವರು ಉಪಸ್ಥಿತರಿದ್ದರು.





