ಮೂಡುಬಿದಿರೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಮೂಡುಬಿದಿರೆ, ಜೂ.17: ಮಳೆಗಾಲ ಆರಂಭವಾದರೆ ಮಳೆ ನೀರು ಸಂಗ್ರಹಣೆ, ಘನ ತ್ಯಾಜ್ಯಗಳಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಪ್ರಮುಖ ರೋಗಗಳಾದ ಮಲೇರಿಯಾ, ಡೆಂಗ್, ಚಿಕೂನ್‌ಗುನ್ಯ, ಮೆದುಳು ಜ್ವರದಂತಹ ಕಾಯಿಲೆಗಳು ಉಲ್ಬಣವಾಗುತ್ತದೆ. ರೋಗಗಳು ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ಹಾಗೂ ಸಂಪೂರ್ಣ ಚಿಕಿತ್ಸೆಯಿಂದ ರೋಗಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಜಿಲ್ಲಾ ಆರೋಗ್ಯ ನಿರೀಕ್ಷಕ ಜಯರಾಮ್ ಪೂಜಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಶ್ರಯದಲ್ಲಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಸಹಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ಶುಕ್ರವಾರ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ರೋಗ ಕಂಡುಬಂದರೆ ಅವುಗಳ ಲಕ್ಷಣ ಅರಿತು ರಕ್ತ ಪರೀಕ್ಷೆ, ಕ್ರಮಬದ್ಧವಾಗಿ ಚಿಕಿತ್ಸೆ ಮಾಡಬೇಕು. ಮೂಡುಬಿದಿರೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ 100 ಮಲೇರಿಯಾ ಪ್ರಕರಣಗಳು ದಾಖಲಾಗಿದ್ದವು. ಅತೀ ಹೆಚ್ಚು ಕಟ್ಟಡಗಳ ಕಾಮಗಾರಿಗಳು ಹಾಗೂ ವಲಸೆ ಕಾರ್ಮಿಕರು ಇದಕ್ಕೆ ಕಾರಣರಾಗಿದ್ದಾರೆ. ಇದೀಗ ಮಲೇರಿಯಾ ಪ್ರಕರಣಗಳು ಕಡಿಮೆಯಾಗಿವೆ. ನಾವು ನಮ್ಮ ಮನೆಯಲ್ಲಿ ಘನತ್ಯಾಜ್ಯ ಹಾಗೂ ನೀರಿನ ಸಂರಕ್ಷಣೆಯನ್ನು ಸಮರ್ಪಕ ರೀತಿಯಲ್ಲಿ ಮಾಡಿದರೆ ಸಾಂಕ್ರಾಮಿಕ ರೋಗಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.
ಮೂಡುಬಿದಿರೆ ಪುರಸಭೆಯ ಮಾಜಿ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಷಯ ಅರಿಯುವುದು ಮಾತ್ರವಲ್ಲ ಅದನ್ನು ನಾವು ಅನುಷ್ಠಾನಗೊಳಿಸಿದರೆ ರೋಗ ಬಾರದಂತೆ ತಡೆಯಬಹುದು ಎಂದರು.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಪುರಸಬಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸದಸ್ಯ ರತ್ನಾಕರ ದೇವಾಡಿಗ, ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ವೇದಿಕೆಯಲ್ಲಿದ್ದರು. ಮೂಡುಬಿದಿರೆ ವಲಯದ ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್ ಸ್ವಾಗತಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು.







