ಜೂ.19ರಂದು ಅಂಬೇಡ್ಕರ್ ಕುಟುಂಬಿಕ ಆನಂದರಾಜ್ ಬೆಂಗಳೂರಿಗೆ
.jpg)
ಹಾಸನ, ಜೂ.17: ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕುಟುಂಬಿಕ ಹಾಗೂ ರಿಪಬ್ಲಿಕ್ ಸೇನೆ ಪಕ್ಷದ ಸಂಸ್ಥಾಪಕ ಆನಂದರಾಜ್ ಜೂ.19ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ನಿರ್ವಾಣಯ್ಯ ಕೆ.ಎಸ್. ಕೆಲವತ್ತಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬೆಂಗಳೂರಿನ ಅಂಬೇಡ್ಕರ್ ಪ್ಲೇಗ್ರೌಂಡ್‌ನಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾರಂಭದಲ್ಲಿ ರಾಜ್ಯದ ಕಾರ್ಯಕರ್ತರನ್ನು ಉದ್ದೇಶಿಸಿ ಆನಂದರಾಜ್ ಮಾತನಾಡಲಿದ್ದಾರೆ ಎಂದರು. ಗುಲ್ಬರ್ಗ ವಿಶ್ವವಿದ್ಯಾನಿಲಯಕ್ಕೆ ಡಾ.ಬಿ.ಆರ್. ಅಂಬೇಡ್ಕರ್‌ರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಮತ್ತು ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಆಲೂರು, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕುಗಳಲ್ಲಿ ಅಂಬೇಡ್ಕರ್‌ರ ಕಂಚಿನ ಪುತ್ಥಳಿ ಸ್ಥಾಪಿಸಲು ಜಿಲ್ಲಾಡಳಿತವನ್ನು ಒತ್ತಾಯಿಸಲಾಗುತ್ತದೆ. ಹಾಗೂ ಜಿಲ್ಲಾದ್ಯಂತ ವಸತಿ ಹೀನರಿಗೆ ಮತ್ತು ಕೊಳಚೆ ನಿವಾಸಿಗಳಿಗೆ ಖಾಯಂ ಮನೆಯನ್ನು ನಿರ್ಮಿಸಿಕೊಡಲು ಇದೇ ವೇಳೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾ ಉಪಾಧ್ಯಕ್ಷ ಮುರುಗೇಂದ್ರಸ್ವಾಮಿ, ಎಚ್.ಟಿ. ಹನುಮಯ್ಯ, ವಕೀಲರಾದ ಬಿ.ಆರ್. ಜಗದೀಶ್, ಸಂಘಟನಾ ಕಾರ್ಯದರ್ಶಿ ಎಂ.ಡಿ. ದ್ಯಾವಯ್ಯ, ಮಹಿಳಾ ವಿಬಾಗದ ಅಧ್ಯಕ್ಷಣಿ ಆಶಾ, ಟಿ.ಟಿ. ರಂಗಸ್ವಾಮಿ ತಟ್ಟೆಕೆರೆ ಇದ್ದರು.





