ಎನ್‌ಜಿಒ ನಿಧಿ ನಿರ್ಬಂಧ ಕಾಯ್ದೆ ಬೇಡ : ಭಾರತಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕು ರಾಯಭಾರಿಗಳ ಕರೆ

ವಿಶ್ವಸಂಸ್ಥೆ, ಜೂ. 17: ಸರಕಾರೇತರ ಸಂಘಟನೆ (ಎನ್‌ಜಿಒ)ಗಳು ವಿದೇಶಿ ನಿಧಿ ಪಡೆಯುವುದನ್ನು ನಿರ್ಬಂಧಿಸುವ ಕಾನೂನನ್ನು ರದ್ದುಪಡಿಸುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತರು ಭಾರತಕ್ಕೆ ಕರೆ ನೀಡಿದ್ದಾರೆ. ಸರಕಾರದ ನೀತಿಗಳನ್ನು ವಿರೋಧಿಸುವ ಗುಂಪುಗಳನ್ನು ‘ವೌನವಾಗಿಸಲು’ ಈ ಕಾನೂನಿನ ವಿಧಿಗಳನ್ನು ಹೆಚ್ಚೆಚ್ಚು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘‘ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಪರಿಸರ ಅಥವಾ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಘಟನೆಗಳನ್ನು ವೌನವಾಗಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯ ವಿಧಿಗಳನ್ನು ಹೆಚ್ಚೆಚ್ಚು ಬಳಸಲಾಗುತ್ತಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಅವುಗಳ ನೀತಿಗಳು ಸರಕಾರದ ನೀತಿಗಳಿಗಿಂತ ಭಿನ್ನವಾಗಿರಬಹುದಾಗಿದೆ’’ ಎಂದು ವಿಶ್ವಸಂಸ್ಥೆಯ ಮೂವರು ಮಾನವಹಕ್ಕುಗಳ ವಿಶೇಷ ರಾಯಭಾರಿಗಳು ಹೇಳಿದ್ದಾರೆ.
ಎಫ್‌ಸಿಆರ್‌ಎಯನ್ನು ಹಿಂದಕ್ಕೆ ಪಡೆಯುವಂತೆ ಮಾನವಹಕ್ಕುಗಳ ರಕ್ಷಕರ ಪರಿಸ್ಥಿತಿಯ ಕುರಿತ ರಾಯಭಾರಿ ಮೈಕಲ್ ಫಾರ್ಸ್ಟ್, ಅಭಿವ್ಯಕ್ತಿ ಸ್ವಾತಂತ್ರ ಕುರಿತ ರಾಯಭಾರಿ ಡೇವಿಡ್ ಕೇಯ್ ಮತ್ತು ಸಂಘಟನಾ ಸ್ವಾತಂತ್ರ ಕುರಿತ ರಾಯಭಾರಿ ಮೈನಾ ಕಿಯಾಯ್ ಭಾರತಕ್ಕೆ ಕರೆ ನೀಡಿದ್ದಾರೆ. ಈ ಕಾನೂನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವ್ಯಾಖ್ಯಾನ ಮತ್ತು ಮಟ್ಟಕ್ಕೆ ಹೊಂದಿಕೆಯಾಗುವುದಿಲ್ಲ ಹಾಗೂ ನಾಗರಿಕ ಸಮಾಜವು ವಿದೇಶಿ ನಿಧಿಯನ್ನು ಪಡೆಯುವುದನ್ನು ತಡೆಯುವುದಕ್ಕಾಗಿ ಅದನ್ನು ಹೆಚ್ಚೆಚ್ಚಾಗಿ ಬಳಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆಯಲು ಹಾಗೂ ಎಲ್ಲ ವಿದೇಶಿ ದೇಣಿಗೆಗಳನ್ನು ಎಫ್‌ಸಿಆರ್‌ಎ ಪ್ರಕಾರವೇ ಖರ್ಚು ಮಾಡಲಾಗಿದೆ ಹಾಗೂ ಲೆಕ್ಕ ಇಡಲಾಗಿದೆ ಎಂಬುದನ್ನು ಸಾಬೀತುಪಡಿಸಲು ‘ಲಾಯರ್ಸ್ ಕಲೆಕ್ಟಿವ್’ ವಿವರವಾದ ಪುರಾವೆಯನ್ನು ಒದಗಿಸಿದರೂ, ಅದರ ಅಮಾನತು ಈಗಲೂ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ಹೇಳಿಕೆಯೊಂದನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಕಚೇರಿಯಿಂದ ಮಾನವಹಕ್ಕುಗಳ ರಾಯಭಾರಿಗಳು ಹೊರಡಿಸಿದ್ದಾರೆ.
‘‘ವಿದೇಶಿ ನಿಧಿಗಳನ್ನು ಪಡೆಯುವುದರಿಂದ ಎನ್‌ಜಿಒಗಳನ್ನು ನಿರ್ಬಂಧಿಸುವುದು ರಾಜಕೀಯ ಪ್ರೇರಿತವಾಗಿರುತ್ತದೆ ಹಾಗೂ ಸರಕಾರದ ನೀತಿಗಳನ್ನು ವಿರೋಧಿಸಿರುವುದಕ್ಕಾಗಿ ಅವುಗಳನ್ನು ಬೆದರಿಸುವ ಹಾಗೂ ಬಾಯಿ ಮುಚ್ಚಿಸುವ ಉದ್ದೇಶ ಹೊಂದಿದೆ ಎಂಬ ವರದಿಗಳಿಂದ ನಾವು ಆಘಾತಗೊಂಡಿದ್ದೇವೆ’’ ಎಂದು ಮಾನವಹಕ್ಕುಗಳ ಪರಿಣತರು ಹೇಳುತ್ತಾರೆ.
ಏನು ಲಾಯರ್ಸ್ ಕಲೆಕ್ಟಿವ್?
ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಗಳನ್ನು ಸಲ್ಲಿಸುವುದಕ್ಕೆ ಹಾಗೂ ಭಾರತೀಯ ಸಮಾಜದ ಶೋಷಿತ ವರ್ಗದ ಸದಸ್ಯರ ಪರವಾಗಿ ವಾದಿಸುವುದಕ್ಕೆ ಲಾಯರ್ಸ್ ಕಲೆಕ್ಟಿವ್ ಹೆಸರುವಾಸಿಯಾಗಿದೆ.
ಈ ಸಂಸ್ಥೆಯ ಸ್ಥಾಪಕರು ಹಾಗೂ ಮಾನವಹಕ್ಕುಗಳ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಆನಂದ್ ಗ್ರೋವರ್ ಸೂಚಿನ ಉದ್ದೇಶಕ್ಕಲ್ಲದೆ ಅನ್ಯ ಉದ್ದೇಶಗಳಿಗೆ ವಿದೇಶಿ ನಿಧಿಯನ್ನು ಬಳಸುವ ಮೂಲಕ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ‘ಲಾಯರ್ಸ್ ಕಲೆಕ್ಟಿವ್’ ಸಂಸ್ಥೆಯ ಮೇಲೆ ನಿಷೇಧ ವಿಧಿಸಲಾಗಿದೆ ಎಂದು ಹೇಳಿಕೆ ಅಭಿಪ್ರಾಯಪಟ್ಟಿದೆ.
ಸೆಟಲ್ವಾದ್ ಎನ್‌ಜಿಒ ನೋಂದಣಿ ರದ್ದು
ನಾಗರಿಕ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾದ್ ಮತ್ತು ಅವರ ಪತಿ ಜಾವೇದ್ ಆನಂದ್ ನಡೆಸುತ್ತಿರುವ ಸಬ್ರಂಗ್ ಟ್ರಸ್ಟ್‌ನ ಖಾಯಂ ನೋಂದಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರ ರದ್ದುಪಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯವು ಗುರುವಾರ ಹೊಸ ಆದೇಶವೊಂದನ್ನು ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.







