ಕಾರ್ಕಳ: ಪುರಸಭೆ ವ್ಯಾಪ್ತಿಯ ಅಂಗಡಿ-ಮುಂಗಟ್ಟುಗಳಿಗೆ ದಿಢೀರ್ ದಾಳಿ

ಕಾರ್ಕಳ, ಜೂ.17: ಪ್ಲಾಸ್ಟಿಕ್ ನಿಷೇಧ ಕಾಯ್ದೆ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿನ ಅಂಗಡಿ ಮತ್ತು ಮಳಿಗೆಗಳಿಗೆ ದಿಢೀರ್ ದಾಳಿ ನಡೆಸಿ, ಪ್ಲಾಸ್ಟಿಕ್ ನಿಷೇಧವಿದ್ದರೂ ಪ್ಲಾಸ್ಟಿಕ್ ಚೀಲಗಳನ್ನು ಗ್ರಾಹಕರಿಗೆ ವಿತರಿಸುತ್ತಿರುವ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.
ಒಂದು ತಿಂಗಳ ಹಿಂದೆ ಮುಖ್ಯಾಧಿಕಾರಿ ಭೇಟಿ ನೀಡಿ ಅಂಗಡಿ ಮಾಲಕರಿಗೆ ಎಚ್ಚರಿಕೆಯನ್ನು ನೀಡಿದ್ದರೂ, ಅಂಗಡಿ ಮಾಲಕರು ಸೂಚನೆಯನ್ನು ನಿರ್ಲಕ್ಷಿಸಿ ಮಾಡದೇ ಪ್ಲಾಸ್ಟಿಕ್ ಚೀಲಗಳನ್ನು ವಿತರಿಸುತ್ತಿದ್ದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಆಸುಪಾಸು ಹಾಗೂ ಪೇಟೆಯಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಗ್ಯ ಪರಿವೀಕ್ಷಕ ಸುಂದರ ಪೂಜಾರಿ, ಪರಿಸರ ಅಭಿಯಂತರ ಮದನ್, ಕಂದಾಯ ಅಧಿಕಾರಿ ಸಂತೋಷ್, ಸಿಬ್ಬಂದಿ ರವಿಪೂಜಾರಿ, ಶೈಲೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪುರಸಭೆ ವ್ಯಾಪ್ತಿಯ ಎಲ್ಲ ಅಂಗಡಿ ಮಾಲಕರಿಗೆ ಕಳೆದ ಬಾರಿ ಸೂಚನೆಯನ್ನು ನೀಡಿದ್ದೇವು. ಆದರೂ ಅಂಗಡಿ ಮಾಲಕರು ಪುರಸಭೆಯ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದು ಕಂಡು ಬಂದಿದೆ. ಅದೇ ಕಾರಣಕ್ಕೆ ದಾಳಿ ನಡೆಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಕಾರ್ಯಾಚರಣೆ ಮುಂದುವರೆಯಲಿದೆ.
-ರಾಯಪ್ಪ, ಮುಖ್ಯಾಧಿಕಾರಿ, ಕಾರ್ಕಳ ಪುರಸಭೆ.







