ಅಕ್ರಮ ಮರಳು ದಾಸ್ತಾನು ವಿರುದ್ಧ ಕ್ರಮಕೈಗೊಳ್ಳದ ಅಧಿಕಾರಿಗಳು: ಆರೋಪ

ಮೂಡುಬಿದಿರೆ, ಜೂ.17: ಪುರಸಭಾ ವ್ಯಾಪ್ತಿಯ ಹೊಸಂಗಡಿ ಅರಮನೆಯ ಬಳಿ ಸುಮಾರು 150 ಲೋಡಿನಷ್ಟು ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು ಈ ಬಗ್ಗೆ ಸ್ಥಳೀಯರು ಕಂದಾಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ವೌನ ವಹಿಸಿದ್ದಾರೆಂದು ಆರೋಪಿಸಲಾಗಿದೆ.
ಮಾರೂರು-ಹೊಸಂಗಡಿ-ಪೆರಿಂಜೆ ಭಾಗದಲ್ಲಿ ಹರಿಯುತ್ತಿರುವ ಫಲ್ಗುಣಿ ನದಿಯಿಂದ ರಾತ್ರಿ ಹಗಲೆನ್ನದೆ ರಾಜಾರೋಷವಾಗಿ ಅಕ್ರಮವಾಗಿ ಮರಳೆತ್ತಿ ಒಂದು ಕಡೆಯಲ್ಲಿ ಸಂಗ್ರಹ ಮಾಡಿ ನಂತರ ಅದನ್ನು ರಾತ್ರಿ ವೇಳೆ ಸಾಗಾಟ ಮಾಡಲಾಗುತ್ತಿದೆ. ಒಂದೆರಡು ವಾರಗಳ ಹಿಂದೆ ಸುಮಾರು 200 ಲೋಡ್‌ಗಳಷ್ಟು ಮರಳನ್ನು ತಂದು ಹಾಕಲಾಗಿತ್ತು. ಗುರುವಾರ ರಾತೋರಾತ್ರಿ ಈ ರಾಶಿಯಿಂದ ಸುಮಾರು 50 ಲೋಡ್‌ನಷ್ಟು ಮರಳನ್ನು ಅಕ್ರಮವಾಗಿ ಸಾಗಿಸಲಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಶುಕ್ರವಾರದಂದು ಮೂಡುಬಿದಿರೆ ಪತ್ರಕರ್ತರು ಸ್ಥಳಕ್ಕೆ ಭೇಟಿ ನೀಡಿದಾಗ ಮರಳನ್ನು ಹೊತ್ತೊಯ್ದಿರುವ ಲಾರಿ, ಟಿಪ್ಪರ್‌ಗಳ ಚಕ್ರದ ಅಚ್ಚು ಒದ್ದೆ ನೆಲದಲ್ಲಿ ಗೋಚರವಾಗಿದೆ.
ಕಳೆದ ವಾರ ಪುತ್ತೂರು ಸಹಾಯಕ ಆಯುಕ್ತರು ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ನದಿ ತೀರದಲ್ಲಿ ಹಾಕಲಾದ ಮರಳಿನ ಬಗ್ಗೆ ಪರಿಶೀಲನೆ ನಡೆಸಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಿದ ಬಳಿಕ ತಾಲೂಕಿನ ಗಡಿ ಪ್ರದೇಶದ ಈಚೆ ಮೂಡುಬಿದಿರೆ ಸರಹದ್ದಿನಲ್ಲಿ ಮರಳು ಸಂಗ್ರಹ -ಸಾಗಾಟ ರಾತೋರಾತ್ರಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಅಕ್ರಮ ಮರಳು ಸಾಗಾಟದಲ್ಲಿ ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳ ಹೆಸರು ಕೇಳಿಬರುತ್ತಿದ್ದು ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.







