ಜೂ.21ರಂದು ಧರ್ಮಸ್ಥಳದಲ್ಲಿ ವಿಶ್ವ ಯೋಗ ದಿನಾಚರಣೆ
ಬೆಳ್ತಂಗಡಿ, ಜೂ.17: ವಿಶ್ವ ಯೋಗ ದಿನಾಚರಣೆಯ ಪೂರ್ವ ಭಾವಿಯಾಗಿ ರಾಷ್ಟ್ರೀಯ ಸೇವಾ ಯೋಜನೆಯ ಆಯ್ದ ಪ್ರತಿನಿಧಿಗಳಿಗೆ ಹಾಗೂ ಯೋಜನಾಧಿಕಾರಿಗಳಿಗೆ ರಾಜೀವ ಗಾಂಧಿ ವಿವಿ ಸಂಯೋಜನೆಯಲ್ಲಿ 3 ದಿನಗಳ ಯೋಗ ಮತ್ತು ಜೀವನ ಶೈಲಿಯ ಕಾರ್ಯಾಗಾರದ ಉದ್ಘಾಟನೆ ಜೂ. 19ರಂದು ಬೆಳಗ್ಗೆ 11 ಗಂಟೆಗೆ ಉಜಿರೆ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೂಗಲ್ ಭಾರತದ ಅಧ್ಯಕ್ಷ ಚೇತನ್ ಕೃಷ್ಣ , ಶಾಸಕ ಕೆ. ವಸಂತ ಬಂಗೇರ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ಎನ್ನೆಸ್ಸೆಸ್ ಪ್ರಾದೇಶಿಕ ನಿರ್ದೇಶಕ ಅರುಣ್ ಎನ್. ಪುಜಾರ್, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ವಸಂತ ಶೆಟ್ಟಿ ಹಾಗೂ ಎನ್ನೆಸ್ಸೆಸ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಜೂ.21 ರಂದು ಬೆಳಗ್ಗೆ 7 ಗಂಟೆಗೆ ಒಂದು ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕ ಕೆ. ವಸಂತ ಬಂಗೇರ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ. ಯಶೋವರ್ಮ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇಗುಳದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಎನ್ನೆಸ್ಸೆಸ್ ಪ್ರಾದೇಶಿಕ ನಿರ್ದೇಶಕ ಅರುಣ್ ಎನ್. ಪುಜಾರ್, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ರಾಷ್ಟೀಯ ಸೇವಾ ಯೋಜನಾಧಿಕಾರಿ ಡಾ.ವಸಂತ ಶೆಟ್ಟಿ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಉಜಿರೆ ಎಸ್‌ಡಿಎಂ ಪ್ರಕೃತಿ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ.ಐ. ಶಶಿಕಾಂತ ಜೈನ್ ಉಪಸ್ಥಿತರಿರುವರು.
ಕರ್ನಾಟಕದ ಎಲ್ಲಾ ವಿ.ವಿ.ಗಳ ಎನ್ನೆಸ್ಸೆಸ್ ಪ್ರತಿನಿಧಿಗಳು, ರಾಜೀವ ಗಾಂಧಿ ವಿವಿಯ ಎನ್ನೆಸ್ಸೆಸ್ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು, ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯೋಗ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







