ಭಾರತದಲ್ಲಿ ಹದಗೆಡುತ್ತಿರುವ ಧಾರ್ಮಿಕ ಸಹಿಷ್ಣುತೆ
ಅಮೆರಿಕ ಕಾಂಗ್ರೆಸ್‌ನಲ್ಲಿ ಸಾಕ್ಷ

ವಾಶಿಂಗ್ಟನ್, ಜೂ. 17: ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ ಹದಗೆಡುತ್ತಿದೆ ಹಾಗೂ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಗಳು ಹೆಚ್ಚುತ್ತಿವೆ ಎಂದು ಮಾನವಹಕ್ಕುಗಳ ಕಾರ್ಯಕರ್ತ, ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಹಾಗೂ ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಆಯೋಗದ ಮಾಜಿ ಅಧ್ಯಕ್ಷ ರಾಬರ್ಟ್ ಪಿ. ಜಾರ್ಜ್ ಅಮೆರಿಕದ ಸಂಸದರಿಗೆ ಹೇಳಿದ್ದಾರೆ.
‘‘ಬಹುತ್ವವಾದಿ ಪ್ರಜಾಸತ್ತೆ ಹೊಂದಿರುವ ಭಾರತದಲ್ಲಿ ಇಂದು ಧಾರ್ಮಿಕ ಸಹಿಷ್ಣುತೆ ಹದಗೆಡುತ್ತಿದೆ ಹಾಗೂ ಧಾರ್ಮಿಕ ಸ್ವಾತಂತ್ರದ ಉಲ್ಲಂಘನೆಗಳು ಹೆಚ್ಚುತ್ತಿವೆ’’ ಎಂದು ಕಾಂಗ್ರೆಸ್‌ನಲ್ಲಿ ನಡೆದ ವಿಚಾರಣೆಯ ವೇಳೆ ಹೇಳಿದರು.
‘‘ಅಲ್ಪಸಂಖ್ಯಾತ ಸಮುದಾಯಗಳು, ಅದರಲ್ಲೂ ಮುಖ್ಯವಾಗಿ ಕ್ರೈಸ್ತ, ಮುಸ್ಲಿಮ್ ಮತ್ತು ಸಿಖ್ಖರು ಕಳೆದ ವರ್ಷ ಮುಖ್ಯವಾಗಿ ಹಿಂದೂ ‘ರಾಷ್ಟ್ರೀಯವಾದಿ ಗುಂಪು’ಗಳಿಂದ ಬೆದರಿಕೆ, ಕಿರುಕುಳ ಮತ್ತು ಹಿಂಸೆ ಎದುರಿಸಿದ್ದಾರೆ’’ ಎಂದು ತನ್ನ ವಿಚಾರಣೆಯ ವೇಳೆ ಜಾರ್ಜ್ ಹೇಳಿದರು.
‘‘ಆಡಳಿತಾರೂಢ ಬಿಜೆಪಿಯ ಸದಸ್ಯರು ಇಂಥ ಗುಂಪುಗಳಿಗೆ ಪರೋಕ್ಷ ಬೆಂಬಲ ನೀಡುತ್ತಾರೆ ಹಾಗೂ ಉದ್ವಿಗ್ನತೆಗೆ ತುಪ್ಪ ಸುರಿಯಲು ಧಾರ್ಮಿಕ ವಿಭಜನೆಯ ಭಾಷಣಗಳನ್ನು ಮಾಡುತ್ತಾರೆ’’ ಎಂದು ಅವರು ಆರೋಪಿಸಿದರು.
ಇದರ ಜೊತೆಗೆ ಪೊಲೀಸರ ಪಕ್ಷಪಾತಪೂರಿತ ಧೋರಣೆ ಮತ್ತು ಅಸಮರ್ಪಕ ನ್ಯಾಯಾಂಗ ವ್ಯವಸ್ಥೆಯು ಶಾಮೀಲಾಗಿ, ಆಕ್ರಮಣಕಾರರಿಗೆ ಕಾನೂನಿನ ವಿನಾಯಿತಿ ಲಭಿಸುವಂಥ ಪರಿಸ್ಥಿತಿ ಏರ್ಪಟ್ಟಿದೆ ಹಾಗೂ ಧರ್ಮ ಪ್ರೇರಿತ ಅಪರಾಧಗಳು ನಡೆದಾಗ ಪಾರಾಗುವ ಯಾವುದೇ ದಾರಿಯಿಲ್ಲದೆ ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಬದುಕುವಂತಾಗಿದೆ’’ ಎಂದು ಗುರುವಾರ ಜಾರ್ಜ್ ಹೇಳಿದರು.







