ಮೋದಿ ಸರಕಾರದಿಂದ ಬರೀ ಮಾತು, ಸುಧಾರಣೆ ಇಲ್ಲ
ಅಮೇರಿಕ ಕಾಂಗ್ರೆಸ್ ನ ಸಂಶೋಧನಾ ವಿಭಾಗದ ವರದಿ

ವಾಷಿಂಗ್ಟನ್,ಜೂ.17: ಭಾರತ ಸರಕಾರದ ವಾಗಾಡಂಬರವಾಗಲಿ ಅಥವಾ ಅದರೊಂದಿಗೆ ಅಮೆರಿಕದ ದ್ವಿಪಕ್ಷೀಯ ಮಾತುಕತೆಗಳಾಗಲಿ ಭಾರತದಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆಗಳಾಗುವಂತೆ ಮಾಡುವಲ್ಲಿ ವಿಫಲವಾಗಿರುವುದು ಅಮೆರಿಕದ ಹಲವಾರು ಸಂಸದರಲ್ಲಿ ಮತ್ತು ಆಸಕ್ತ ಪಾಲುದಾರರಲ್ಲಿ ಕಳವಳವನ್ನು ಮೂಡಿಸಿದೆ ಎಂದು ಅಮೆರಿಕದ ಕಾಂಗ್ರೆಸ್‌ನ ಸಂಶೋಧನಾ ಘಟಕ(ಸಿಆರ್‌ಎಸ್)ವು ತನ್ನ ವರದಿಯಲ್ಲಿ ಹೇಳಿದೆ.
ಮೋದಿ ಆಡಳಿತವು ಎರಡು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದೆ. ಆದರೂ ಭಾರತದಲ್ಲಿ ಹೇಳಿಕೊಳ್ಳುವಷ್ಟು, ಸುಸ್ಥಿರ ಆರ್ಥಿಕ ಸುಧಾರಣೆಗಳಾಗಿಲ್ಲ. ಇದು ಸಂಸದರು ಮತ್ತು ಆಸಕ್ತ ಪಾಲುದಾರರನ್ನು ಕಳವಳಕ್ಕೀಡು ಮಾಡಿದೆ ಮತ್ತು ಭಾರತ-ಅಮೆರಿಕ ಸಂಬಂಧಗಳು ವಿಸ್ತರಿಸಬಹುದೆಂಬ ಮೊದಲಿನ ಆಶಾಭಾವನೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ಸಿಆರ್‌ಎಸ್ ಭಾರತ ಕುರಿತ ತನ್ನ ಸಂಕ್ಷಿಪ್ತ ವರದಿಯಲ್ಲಿ ತಿಳಿಸಿದೆ. ತನ್ಮಧ್ಯೆ,ಭಾರತದಲ್ಲಿ ವೃದ್ಧಿಶೀಲ ಸುಧಾರಣೆಗಳಾಗಿವೆ ಎನ್ನುವುದು ಇತರರ ವಾದವಾಗಿದೆ ಎಂದು ಅದು ಹೇಳಿದೆ.
ಭಾರತ ಸರಕಾರದ ಆರ್ಥಿಕ ಕ್ರಮಗಳನ್ನು ಟೀಕಿಸಿರುವ ವರದಿಯು ಭಾರತ-ಅಮೆರಿಕ ರಕ್ಷಣಾ ಸಹಕಾರದ ಕುರಿತು ಆಶಾವಾದವನ್ನು ಹೊಂದಿದೆ.
ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ಮತು ದ್ವಿಪಕ್ಷೀಯ ಸಂಶೋಧನಾ ಘಟಕವಾಗಿರುವ ಸಿಆರ್‌ಎಸ್ ಸಂಸದರು ಮಾಹಿತಿಪೂರ್ವಕ ನಿರ್ಧಾರಗಳನ್ನು ತಳೆಯಲು ಸಾಧ್ಯವಾಗುವಂತೆ ಅವರಿಗೆ ಆಸಕ್ತಿಯ ವಿಷಯಗಳಲ್ಲಿ ವರದಿಗಳನ್ನು ಸಿದ್ಧಗೊಳಿಸುತ್ತದೆ. ಇದು ಕಾಂಗ್ರೆಸ್‌ನ ಅಧಿಕೃತ ವರದಿ ಅಥವಾ ಅಭಿಪ್ರಾಯವಲ್ಲ.





