ಸಾರ್ವಜನಿಕರಲ್ಲಿ ಆತಂಕದ ಛಾಯೆ
ಹಾರಂಗಿ ಅಣೆಕಟ್ಟು ಸೋರಿಕೆ
ಕುಶಾಲನಗರ, ಜೂ.17: ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಹಾಗೂ ರಾಜ್ಯದ ಜೀವಜಲವಾದ ಹಾರಂಗಿ ಜಲಾಶಯದಲ್ಲಿ ಕಳೆದ ಕೆಲವು ವರ್ಷಗಳಿಂದ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗುವುದನ್ನು ಕಂಡ ಸ್ಥಳೀಯ ನಾಗರಿಕರು ಮತ್ತು ರೈತರು ಪ್ರತಿಭಟನೆಯ ಎಚ್ಚರಿಕೆ ನೀಡಿದರು. ಅಲ್ಲದೆ ಅಣೆಕಟ್ಟು ಬಿರುಕು ಬಿಡಬಹುದೆಂಬ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡ ಕಾವೇರಿ ನೀರಾವರಿ ಮಂಡಳಿ (ನಿ)ಹಾರಂಗಿಯ ಕಾರ್ಯನಿರ್ವಾಹಕ ಇಂಜಿನಿಯರ್ ಅಣೆಕಟ್ಟಿನ ದುರಸ್ತಿ ಕಾರ್ಯ ಮಾಡುತ್ತಿರುವುದು ರೈತರಲ್ಲಿ ಸಂತೋಷ ತರಿಸಿದೆ. ನಾಗರಿಕರು ಹೇಳುವಂತೆ, ಹಾರಂಗಿ ಜಲಾಶಯದಿಂದ ಬರುವ ನೀರನ್ನು, ಮಾದಲಾಪುರ, ಕೂಡಿಗೆ, ಹೆಬ್ಬಾಲೆ, ಶಿರಾಂಗಲ ಸೇರಿದಂತೆ ಮೈಸೂರು ಮತ್ತು ಹಾಸನ ಜಿಲ್ಲೆಯ ಭಾಗದ ರೈತರು ಹಾರಂಗಿ ಜಲಾಶಯದ ಒಳಹರಿವು ಬರುವ ಉಪನಾಲೆಗಳಿಂದ ಹರಿಯುವ ನೀರಿನಿಂದ ಸಾವಿರಾರು ಹೆಕ್ಟೇರ್ ಬೆಳೆಗಳಿಗೆ ಹಾಗೂ ಕುಡಿಯುವ ನೀರನ್ನು ನೀಡುತ್ತಿದೆ. ಮುಂಗಾರಿಗೂ ಮುನ್ನ ದುರಸ್ತಿ ಕಾರ್ಯವನ್ನು ಮುಗಿಸಿದರೆ ಸಂಗ್ರಹವಾದ ನೀರು ಅನವಶ್ಯಕವಾಗಿ ಹರಿದುಹೋಗುವುದನ್ನು ತಪ್ಪಿಸಿದಂತಾಗುತ್ತದೆ. ಹಾಗೆ ಅಣೆಕಟ್ಟಿನ ಬಿರುಕಿನ ಬಗೆಗಿನ ಆತಂಕ ದೂರವಾಗುತ್ತದೆಯೇ ಎಂದು ಕಾದುನೋಡೋಣ.





