ಮುಂದಿನ ಪೀಳಿಗೆಗಾಗಿ ಗಿಡಮರ ಬೆಳೆಸಿ: ಸೋಮಶೇಖರ್

ಚಿಕ್ಕಮಗಳೂರು, ಜೂ.17: ಮುಂದಿನ ಪೀಳಿಗೆಯ ಜನ ನೆಮ್ಮದಿಯಿಂದ ಬಾಳಬೇಕಾದರೆ ಈಗಿನಿಂದಲೇ ಗಿಡಮರಗಳನ್ನು ನೆಟ್ಟು ಕಾಡನ್ನು ಬೆಳೆಸಬೇಕು ಎಂದು ಜಿಪಂ ಸದಸ್ಯ ಬಿ.ಜಿ.ಸೋಮಶೇಖರ್ ಸಲಹೆ ಮಾಡಿದ್ದಾರೆ.
ಅವರು ತಾಲೂಕಿನ ಕುರುವಂಗಿಯ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಪ್ರಕೃತಿಯನ್ನು ದೇವರೆಂದು ಭಾವಿಸಿ ಗಿಡ ಮರಗಳನ್ನು ನೆಟ್ಟು ಕಾಡನ್ನು ಬೆಳೆಸಿದ್ದರಿಂದಾಗಿ ಆ ಕಾಲದಲ್ಲಿ ಸಕಾಲಕ್ಕೆ ಮಳೆ ಬೆಳೆಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯವನ್ನು ನಾಶ ಮಾಡಿದ ಪರಿಣಾಮ ಪರಿಸರದಲ್ಲಿ ಅಸಮತೋಲನ ಉಂಟಾಗಿ ಭೂಮಿಯ ತಾಪಮಾನ ಏರತೊಡಗಿದು,್ದ ಬರಗಾಲದ ಪರಿಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.
ನಾವು ಈಗಲಾದರೂ ಎಚ್ಚೆತ್ತು ಮರ ಗಿಡಗಳನ್ನು ನೆಟ್ಟು ಕಾಡನ್ನು ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆಗೆ ಸಕಾಲಕ್ಕೆ ಮಳೆ ಬೆಳೆಯಾಗುತ್ತದೆ ಅವರ ಬದುಕು ಹಸನಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ನಮ್ಮ ಮಿತಿಮೀರಿದ ದುರಾಸೆ ಮತ್ತು ಸ್ವಾರ್ಥದಿಂದಾಗಿ ಕಾಡನ್ನು ನಾಶಗೊಳಿಸಿದ ಪರಿಣಾಮ ಇಂದು ಪರಿಸರ ಸಮತೋಲನ ಕಳೆದುಕೊಳ್ಳುತ್ತಿದ್ದು, ಕಂಡು ಕೇಳರಿಯದ ರೋಗರುಜಿನಗಳು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರ ಸೂಚನೆಯಂತೆ ವೇದಿಕೆ ವತಿಯಿಂದ ರಾಜ್ಯಾದ್ಯಂತ ಈ ವರ್ಷ ಐದು ಲಕ್ಷ ಗಿಡಗಳನ್ನು ನೆಡುವುದರ ಜೊತೆಗೆ ಜನರಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ವನಮಹೋತ್ಸವದ ಪ್ರಯುಕ್ತ ಶಾಲೆಯ ಆವರಣ ಮತ್ತು ಗ್ರಾಮದ ವಿವಿಧೆಡೆ ಗಿಡಗಳನ್ನು ನೆಡಲಾಯಿತು. ಗ್ರಾಮಸ್ಥರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮನೋಜ್‌ಶೆಟ್ಟಿ, ಉಪಾಧ್ಯಕ್ಷ ಆರ್.ಕುಮಾರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನಾಗಲತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ನಗರ ಕಾರ್ಯದರ್ಶಿ ಇರ್ಷಾದ್ ಅಹಮದ್, ತಾಪಂ ಸದಸ್ಯ ಜಯಣ್ಣ, ಗ್ರಾಪಂ ಉಪಾಧ್ಯಕ್ಷೆ ರಮ್ಯಾ ಯೋಗೀಶ್, ಎಸ್‌ಡಿಎಂಸಿ ಅಧ್ಯಕ್ಷ ಚನ್ನಶೆಟ್ಟಿ, ಮುಖ್ಯ ಶಿಕ್ಷಕ ಬಿ.ಆರ್.ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.







