ರಿಯೋ ಒಲಿಂಪಿಕ್ಸ್: ಸತೀಶ್, ಮೀರಾಬಾಯಿಗೆ ಟಿಕೆಟ್
ಹೊಸದಿಲ್ಲಿ, ಜೂ.17: ಭಾರತೀಯ ವೇಟ್‌ಲಿಫ್ಟರ್‌ಗಳಾದ ಶಿವಲಿಂಗಂ ಸತೀಶ್ ಕುಮಾರ್ ಹಾಗೂ ಎಸ್. ಮಿರಾಬಾಯಿ ಚಾನು ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಈ ಇಬ್ಬರು ಪಟಿಯಾಲಾದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು. ಎಪ್ರಿಲ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಸೀನಿಯರ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತ ರಿಯೋ ಗೇಮ್ಸ್‌ಗೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಲಾ ಒಂದು ಕೋಟಾ ಸ್ಥಾನ ಪಡೆದಿತ್ತು. 77 ಕೆ.ಜಿ. ವಿಭಾಗದಲ್ಲಿ ಒಟ್ಟು 336 ಕೆಜಿ ಎತ್ತಿ ಹಿಡಿದ ಸತೀಶ್ ರಿಯೋ ಟಿಕೆಟ್ ಪಡೆದರು.
ಮಹಿಳೆಯರ ವಿಭಾಗದ ಎಲ್ಲ ತೂಕ ವಿಭಾಗದ ಸ್ಪರ್ಧೆಗಳಲ್ಲಿ ಮೀರಾಬಾಯಿ ಮೊದಲ ಸ್ಥಾನ ಪಡೆದರು. 48 ಕೆ.ಜಿ. ವಿಭಾಗದಲ್ಲಿ ಗೇಮ್ಸ್‌ಗೆ ಅರ್ಹತೆ ಪಡೆದಿರುವ ಮೀರಾಬಾಯಿ ಎರಡು ಹೊಸ ರಾಷ್ಟ್ರೀಯ ದಾಖಲೆ ಬರೆದರು.
2012ರ ಒಲಿಂಪಿಕ್ಸ್ ಹಾಗೂ ವಿಶ್ವ ರ್ಯಾಂಕಿಂಗ್‌ನ್ನು ಆಧರಿಸಿ ಪುರುಷರ ಹಾಗೂ ಮಹಿಳೆಯರ ವಿಭಾಗದ ಲಿಫ್ಟರ್‌ಗಳನ್ನು ಟ್ರಯಲ್ಸ್‌ಗೆ ಆಯ್ಕ್ಕೆ ಮಾಡಲಾಗುತ್ತದೆ. ಪುರುಷರ, ಮಹಿಳಾ ವಿಭಾಗದ ಅಗ್ರ-2 ಲಿಫ್ಟರ್‌ಗಳನ್ನು ಭಾರತೀಯ ವೆಟ್‌ಲಿಫ್ಟಿಂಗ್ ಫೆಡರೇಶನ್ ಆಯ್ಕೆ ಸಮಿತಿ ಸಮ್ಮುಖದಲ್ಲಿ ಆಯ್ಕೆ ಮಾಡಲಾಗುತ್ತದೆ.







