ಪ್ರತಿಭಟನೆಗೆ ವಿದ್ಯಾರ್ಥಿಗಳ ಬಳಕೆ ವಿರುದ್ಧ ಸೂಕ್ತ ಕ್ರಮ
ಎಸ್ಪಿಯಿಂದ ಎಚ್ಚರಿಕೆ
ಶಿವಮೊಗ್ಗ, ಜೂ.17: ಪ್ರತಿಭಟನೆಗಳಿಗೆ ವಿದ್ಯಾರ್ಥಿಗಳನ್ನು ಬಳಕೆ ಮಾಡುವ ಸಂಘಟನೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ರವಿ ಡಿ. ಚೆನ್ನಣ್ಣನವರ್ ಹೇಳಿಕೆ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವಂತೆ ಮಾಡಿದೆ. ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಎಸ್ಪಿಯವರ ಕ್ರಮ ಸರಿಯಿದೆ ಎಂದು ಸಮರ್ಥಿಸಿಕೊಂಡಿದೆ. ‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಒಳ್ಳೆಯ ಕ್ರಮವಾಗಿದೆ. ಕೆಲ ರಾಜಕೀಯ ಕೃಪಾಪೋಷಿತ ಸಂಘಟನೆಗಳು ಪ್ರತಿಭಟನೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪಲಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲೂರು ಮೇಘರಾಜ್ ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು. ಇದರ ಸದ್ಬಳಕೆಯಾಗಬೇಕು. ಅನ್ಯಾಯದ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಬೇಕು. ಆದರೆ ಕೆಲ ರಾಜಕೀಯ ಕೃಪಾಪೋಷಿತ ವಿದ್ಯಾರ್ಥಿ ಸಂಘಟನೆಗಳು ತಮ್ಮ ಸ್ವಾರ್ಥ ಸಾಧನೆಗೆ, ರಾಜಕೀಯ ಹೋರಾಟಕ್ಕೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವುದು ಹೇಯ ಸಂಗತಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕರೆದೊ ಯ್ಯುವ ಸಂಘಟನೆಗಳ ವಿರುದ್ಧ ಕ್ರಮಕೈ ಗೊಳ್ಳುವುದಾಗಿ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಹೇಳಿರುವುದು ನಿಜಕ್ಕೂ ಸಮಂಜಸವಾಗಿದೆ. ಎಸ್ಪಿಯವರ ನಿಲುವನ್ನು ತಾನು ಬೆಂಬಲಿಸುತ್ತೇನೆ. ಈ ಕೆಲಸವನ್ನು ಈ ಹಿಂದೆಯೇ ಪೊಲೀಸ್ ಇಲಾಖೆ ಮಾಡಬೇಕಾಗಿತ್ತು. ತಡವಾಗಿಯಾದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದು ಕಲ್ಲೂರು ಮೇಘರಾಜ್ ಹೇಳಿದ್ದಾರೆ. ಎನ್‌ಎಸ್‌ಯುಐ ಸಂಘಟನೆಯ ನಗರ ಘಟಕದ ಅಧ್ಯಕ್ಷ ಎಚ್.ಎಸ್. ಬಾಲಾಜಿ ಶುಕ್ರವಾರ ಪತ್ರಿಕಾ ಪ್ರಕಟನೆೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಬಳಸಿಕೊಳ್ಳುವುದು ಅಪರಾಧ. ಅಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂಬ ಎಸ್ಪಿಯವರ ಹೇಳಿಕೆ ವಿದ್ಯಾರ್ಥಿ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ. ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲವೆಂದು’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಸ್ಪಿಯವರು ದೇಶದ ಸ್ವಾತಂತ್ರ ಹೋರಾಟದ ಇತಿಹಾಸ ಮರೆತಿರುವಂತೆ ಕಾಣುತ್ತದೆ. ದೇಶದಲ್ಲಿ ಯಾವುದೇ ಬದಲಾವಣೆ ಅಥವಾ ಕ್ರಾಂತಿ ಆಗಿದ್ದರೆ ಅದಕ್ಕೆ ವಿದ್ಯಾರ್ಥಿ ಶಕ್ತಿಯ ಕೊಡುಗೆ ಅಪಾರವಾಗಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿರುವ ಸಿಇಟಿ ಪರೀಕ್ಷೆಯ ವಿಚಾರ ಮುಂದಿಟ್ಟುಕೊಂಡು ಎನ್‌ಎಸ್‌ಯುಐ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ ಪರಿಣಾಮವಾಗಿ ಏಕರೂಪದ ಸಿಇಟಿ ವ್ಯವಸ್ಥೆ ಆರಂಭವಾಗಿದೆ. ಹಾಗೆಯೇ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳು, ಶಾಲಾ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ಪಡೆಯುವುದು, ಅಧ್ಯಾಪಕರ ಅನುಚಿತ ವರ್ತನೆಗಳು, ವಿವಿಗಳು ಆಗಾಗ್ಗೆ ಹೊರಡಿಸುವ ಆದೇಶಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರತಿಭಟನೆ ಅನಿವಾರ್ಯವಾಗಲಿದೆ. ಅದನ್ನು ಕಾನೂನು ಬಾಹಿರ ಎನ್ನುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಹತ್ತಿಕ್ಕುವ ಪ್ರಯತ್ನ ಸಲ್ಲದು ಎಂದು ಎಚ್.ಎಸ್. ಬಾಲಾಜಿ ತಿಳಿಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ, ಉತ್ತಮ ವಿದ್ಯಾಭ್ಯಾಸಕ್ಕಾಗಿ ಪೋಷಕರು ಹಗಲಿರುಳು ಶ್ರಮಿಸುತ್ತ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ವಿದ್ಯಾರ್ಥಿಗಳನ್ನು ರಾಜಕೀಯ ಹೋರಾಟಕ್ಕೆ ಬಳಕೆ ಮಾಡಿಕೊಳ್ಳುವ ಸಂಘಟನೆಗಳು ಇದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳ ಜೀವನ ಹಾಳಾಗದಂತೆ ಎಚ್ಚರವಹಿಸಬೇಕು. ವಿದ್ಯಾರ್ಥಿಗಳು ಹೋರಾಟ ಮಾಡುವುದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ತಪ್ಪಲ್ಲ. ಆದರೆ ತಮಗೆ ಸಂಬಂಧವಿಲ್ಲದ, ರಾಜಕಾರಣಿಗಳ ಓಲೈಕೆಗೋಸ್ಕರ ನಡೆಯುವ ಪ್ರತಿಭಟನೆಯಲ್ಲಿ ಭಾಗಿಯಾಗುವುದು ಸರಿಯಲ್ಲಎಂದು ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಮೇಘರಾಜ್ ಕಲ್ಲೂರು ಅಭಿಪ್ರಾಯಿಸಿದ್ದಾರೆ.
ಕಾಲೇಜುಗಳಲ್ಲಿ ಗೂಂಡಾಗಳ ಹಾವಳಿ ತಪ್ಪಿಸಿ: ವಿ
<
ದ್ಯಾರ್ಥಿ ಸಂಟನೆಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಪ್ರತಿಷ್ಠಿತ ಕಾಲೇಜುಗಳಲ್ಲಿ ಗೂಂಡಾಗಳ ಹಾವಳಿಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿ. ರಾಜಕೀಯ ಪಕ್ಷಗಳ ನಾಯಕರು, ಸಚಿವರು ಬಂದಾಗ ಅವರನ್ನು ಸ್ವಾಗತ ಮಾಡಲು ಶಾಲಾ-ಕಾಲೇಜುಗಳಿಂದ ಮಕ್ಕಳನ್ನು ಕರೆತಂದು ಬಿಸಿಲಿನಲ್ಲಿ ನಿಲ್ಲಿಸುವಾಗ ಅದನ್ನು ಪ್ರಶ್ನಿಸಲಿ. ಮನ ಬಂದಂತೆ ಹೇಳಿಕೆ ನೀಡುವುದನ್ನು ತಪ್ಪಿಸಲಿ. ವಿದ್ಯಾರ್ಥಿ ಸಂಘಟನೆಗಳ ಹೋರಾಟ ವಿದ್ಯಾರ್ಥಿಗಳ ಹಿತಕ್ಕಾಗಿ ಎಂಬುದನ್ನು ಮರೆಯಬಾರದು. ಎಚ್.ಎಸ್.ಬಾಲಾಜಿ, ಎನ್‌ಎಸ್‌ಯುಐ ನಗರಾಧ್ಯಕ್ಷ.
ಎನ್‌ಎಸ್‌ಯುಐ ಆಕೆ್ಷೀಪ: ದೇಶದಲ್ಲಿ ಯಾವುದೇ ಬದಲಾವಣೆ ಅಥವಾ ಕ್ರಾಂತಿಯಾಗಿದ್ದರೆ ಅದಕ್ಕೆ ವಿದ್ಯಾರ್ಥಿ ಶಕ್ತಿಯ ಕೊಡುಗೆ ಅಪಾರವಾದುದು. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ವಿದ್ಯಾರ್ಥಿಗಳನ್ನು ಸೌಲಭ್ಯದಿಂದ ವಂಚಿತರನ್ನಾಗಿಸಲಾಗುತ್ತದೆ ಎಂದು ಎನ್‌ಎಸ್‌ಯುಐ ಸಂಘಟನೆ ಎಸ್ಪಿಯವರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.







