ಇಂದು ಕೋಲ್ಕತಾದಲ್ಲಿ ಸೂಪರ್ ಲೀಗ್ ಹಗಲು-ರಾತ್ರಿ ಪಂದ್ಯ
ಶಮಿ, ಸಹಾಗೆ ಆಡುವ ಅವಕಾಶ
ಕೋಲ್ಕತಾ, ಜೂ.17: ಬಂಗಾಳ ಕ್ರಿಕೆಟ್ ಅಸೋಸಿಯೇಶನ್‌ನ ಆಶ್ರಯದಲ್ಲಿ ಶನಿವಾರ ಇಲ್ಲಿ ಆರಂಭವಾಗಲಿರುವ ಸೂಪರ್ ಲೀಗ್ ಫೈನಲ್‌ನಲ್ಲಿ ಪಿಂಕ್ ಚೆಂಡನ್ನು ಬಳಸಿಕೊಂಡು ಇದೇ ಮೊದಲ ಬಾರಿ ಹಗಲು-ರಾತ್ರಿ ಪಂದ್ಯ ನಡೆಯಲಿದೆ
. ಸ್ಥಳೀಯ ತಂಡಗಳಾದ ಮೋಹನ್ ಬಗಾನ್ ಹಾಗೂ ಭವಾನಿಪುರ್ ನಡುವೆ ನಡೆಯಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ಮುಹಮ್ಮದ್ ಶಮಿ ಹಾಗೂ ವೃದ್ದಿಮಾನ್ ಸಹಾ ಭಾಗವಹಿಸಲಿದ್ದಾರೆ.
ಇದೇ ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಅಹರ್ನಿಶಿ ಪಂದ್ಯ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಕನಸಿನ ಕೂಸು. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಪಂದ್ಯ ಐತಿಹಾಸಿಕ ಮಹತ್ವ ಪಡೆದಿದೆ. ಉಪಖಂಡದ ಪಿಚ್‌ನಲ್ಲಿ ಪಿಂಕ್ ಬಣ್ಣದ ಕೂಕಬುರಾ ಚೆಂಡನ್ನು ಬಳಸುವ ಸಾಧ್ಯತೆಯಿದೆ.
ಈ ಪ್ರಯೋಗ ಯಶಸ್ಸು ಕಂಡರೆ, ಬಿಸಿಸಿಐ ಯೋಜನೆ ಹಾಕಿಕೊಂಡಿರುವ ನ್ಯೂಝಿಲೆಂಡ್-ಭಾರತ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಆತಿಥ್ಯದ ಹಕ್ಕು ಕೋಲ್ಕತಾದ ಪಾಲಾಗುವ ಸಾಧ್ಯತೆಯಿದೆ.
ಮೋಹನ್ ಬಗಾನ್ ತಂಡವನ್ನು ಪ್ರತಿನಿಧಿಸುತ್ತಿರುವ ಶಮಿ ಅಕ್ಟೋಬರ್‌ನಲ್ಲಿ ನಿಗದಿಯಾಗಿರುವ ಭಾರತ-ಕಿವೀಸ್ ನಡುವಿನ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮೊದಲು ಪಿಂಕ್ ಚೆಂಡಿನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆಯಲಿದ್ದಾರೆ.
ವೃದ್ದಿಮಾನ್ ಹೊನಲು-ಬೆಳಕಿನ ಪಂದ್ಯದಲ್ಲಿ ವಿಕೆಟ್‌ಕೀಪಿಂಗ್ ಮಾಡುವ ಸವಾಲು ಎದುರಿಸಬೇಕಾಗಿದೆ. ಮಾತ್ರವಲ್ಲ ಬ್ಯಾಟಿಂಗ್‌ನ ವೇಳೆ ಪಿಂಕ್ ಚೆಂಡಿನ ದಾಳಿ ಎದುರಿಸಬೇಕಾಗಿದೆ.ವೃದ್ದಿಮಾನ್ 2009-10ರಲ್ಲಿ ಭಾರತ ಎ ತಂಡದೊಂದಿಗೆ ಆಸ್ಟೇಲಿಯ ಪ್ರವಾಸ ಕೈಗೊಂಡಿದ್ದಾಗ ಪಿಂಕ್ ಹಾಗೂ ಗ್ರೀನ್ ಚೆಂಡುಗಳಲ್ಲಿ ಆಡಿದ ಅನುಭವ ಪಡೆದಿದ್ದರು.
ದುಲೀಪ್ ಟ್ರೋಫಿಯನ್ನು ಕೂಡ ಹಗಲು-ರಾತ್ರಿ ಪಂದ್ಯವಾಗಿ ಆಡಲು ಈಗಾಗಲೇ ಬಿಸಿಸಿಐ ನಿರ್ಧರಿಸಿದೆ







