ಶಾಸಕ ಮಲ್ಲಿಕಾರ್ಜುನ ಖೂಬಾ ವಿರುದ್ಧದ ಎಫ್‌ಐಆರ್ ಚುನಾವಣಾ ಆಯೋಗಕ್ಕೆ ರವಾನೆ

ಬೆಂಗಳೂರು, ಜೂ. 17: ರಾಜ್ಯಸಭೆ ಚುನಾವಣೆಗೆ ಮತ ಹಾಕಲು ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪಕ್ಕೆ ಸಿಲುಕಿರುವ ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರು ಮತ್ತು ಎಫ್‌ಐಆರ್ ಪ್ರತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ.
ಚುನಾವಣೆಗೆ ಮೊದಲು ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ತಮ್ಮ ಮತ ಚಲಾವಣೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಆ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಕೇಂದ್ರ ಚು. ಆಯೋಗ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಖೂಬಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾಧಿಕಾರಿಯೂ ಆಗಿದ್ದ ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿಯವರಿಗೆ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ಜೂ.14ರಂದು ಎಸ್.ಮೂರ್ತಿ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಖೂಬಾ ವಿರುದ್ಧ ದೂರು ನೀಡಿದ್ದರು. ಆ ಬಳಿಕ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ಆ ಎರಡು ಪ್ರತಿಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗದ ಶಿಫಾರಸನ್ನು ಆಧರಿಸಿ ಕೇಂದ್ರ ಗೃಹ ಇಲಾಖೆ ಸಿಬಿಐಯಿಂದ ಪ್ರಕರಣದ ತನಿಖೆಗೆ ತನಿಖಾಧಿಕಾರಿ ನಿಯೋಜನೆ ಬಳಿಕ ತನಿಖೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ. ಅನಂತರ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.





