ಸ್ವಯಂಕೃತ ತಪ್ಪಿನಿಂದ ಟ್ರಂಪ್ ಮೋಟಾರ್ ಸಂಸ್ಥೆ ಹೊರಕ್ಕೆ: ದೇಶಪಾಂಡೆ

ಬೆಂಗಳೂರು, ಜೂ.17: ಸ್ವಯಂಕೃತ ತಪ್ಪಿನಿಂದಾಗಿ ಟ್ರಂಪ್ ಮೋಟಾರ್ ಸೈಕಲ್ ಇಂಡಿಯಾ ಸಂಸ್ಥೆಯು ರಾಜ್ಯದಿಂದ ಹೊರಕ್ಕೆ ಹೋಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಪೆನಿಗೆ ಪ್ರತೀ ಎಕರೆಗೆ 85 ಲಕ್ಷ ರೂ.ಗಳಂತೆ ನೀಡಲಾಗಿದೆ. 1.5 ಕೋಟಿ ರೂ.ಗಳನ್ನು ಖರ್ಚು ಮಾಡಿ ಭೂಮಿಯನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಇದುವರೆಗೆ ಕೆಐಎಡಿಬಿಗೆ ಸಂಸ್ಥೆಯು ಮುಂಗಡ ಹಣವನ್ನು ಪಾವತಿಸಿಲ್ಲ ಎಂದರು.
2014ರ ಡಿ.8ರಂದೇ ಟ್ರಂಪ್ ಮೋಟಾರ್ ಸೈಕಲ್ ಸಂಸ್ಥೆಯ ಭೂ ಹಂಚಿಕೆ ರದ್ದಾಗಿದೆ. ಆನಂತರ ಈ ಸಂಸ್ಥೆ ಬಗ್ಗೆ ಹಣಕಾಸು ಇಲಾಖೆ ಪರಿಶೀಲಿಸಲು ಸೂಚಿಸಿತ್ತು. ಆದರೆ, ಈಗ ಹೇಳದೆ ಕೇಳದೆ ಏಕಾಏಕಿ ರಾಜ್ಯದಿಂದ ಹೊರ ಹೋಗಿದ್ದಾರೆ ಎಂದು ದೇಶಪಾಂಡೆ ಕಿಡಿಗಾರಿದರು. ಟ್ರಂಪ್ ಮೋಟಾರ್ ಸೈಕಲ್ ಇಂಡಿಯಾ 5.8 ಕೋಟಿ ರೂ.ಮಾತ್ರ ಪಾವತಿಸಿದೆ. ನಿಯಮದಂತೆ ಉಳಿದ 20 ಕೋಟಿ ರೂ.ಪಾವತಿಸಿಲ್ಲ. ಸರಕಾರದ ಜೊತೆಗೆ ಆ ಸಂಸ್ಥೆ ಯಾವುದೇ ಸಂಪರ್ಕ ಮಾಡಿಲ್ಲ. ಕೆಐಎಡಿಬಿ ಕಾಯ್ದೆ ಪ್ರಕಾರ 30 ದಿನಗಳಲ್ಲಿ ಹಣ ಪಾವತಿಸಬೇಕು. ಎರಡು ವರ್ಷ ಸಮಯ ನೀಡಿದರೂ ಸಂಸ್ಥೆ ಮುಂಗಡ ಹಣ ಪಾವತಿಸದಿರುವುದು ಸಂಸ್ಥೆಯ ತಪ್ಪು ಎಂದು ಅವರು ಹೇಳಿದರು.
ಕೋಲಾರ ಸಮೀಪದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜಮೀನು ಲಭ್ಯವಿಲ್ಲ. ಅಂತಹದರಲ್ಲಿ ಬೇರೆ ಕಂಪೆನಿಗಳಿಗೆ ಎಲ್ಲಿಂದ ಜಮೀನು ನೀಡೋದು. ಈಗ ಇದರಿಂದಾಗಿ ನಾಲ್ಕು ಸಂಸ್ಥೆಗಳು ರಾಜ್ಯದಿಂದ ಹೊರ ಹೋಗಿವೆ ಎಂಬುದು ಸತ್ಯಕ್ಕೆ ದೂರವಾದದ್ದು. ಆದರೆ, ನಾಲ್ಕು ಹೋದರೆ ಎಂಟು ಸಂಸ್ಥೆಗಳು ಬಂದಿವೆ. ಅದು ಬೇರೆ ವಿಚಾರ ಎಂದು ದೇಶಪಾಂಡೆ ಹೇಳಿದರು.





