ಚುಟುಕು ಸುದ್ದಿಗಳು
ಅಪರಿಚಿತ ವ್ಯಕ್ತಿ ಮೃತ್ಯು
ಪುತ್ತೂರು, ಜೂ.17: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿರುವ ಅಂಚೆ ಕಚೇರಿ ಬಳಿ ಶುಕ್ರವಾರ ಪತ್ತೆಯಾಗಿದೆ. ಸುಮಾರು 50 ವರ್ಷ ಪ್ರಾಯದ ಈ ವ್ಯಕ್ತಿ ತುಂಬುತೋಳಿನ ಹಸಿರು- ಕಪ್ಪು ಬಣ್ಣದ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದು, ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ
ಬೈಕ್‌ಗಳ ಢಿಕ್ಕಿ: ಮೂವರಿಗೆ ಗಾಯ
ಪುತ್ತೂರು, ಜೂ.17: ಪುತ್ತೂರು ನಗರ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಸಮೀಪ ಎರಡು ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿ ಮೂವರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆೆ. ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ನಿತಿನ್, ಪುತ್ತೂರಿನ ಸಿಟಿ ಗುಡ್ಡೆ ನಿವಾಸಿ ಶ್ರವಣ್ ಮತ್ತು ಸಾಮೆತ್ತಡ್ಕ ನಿವಾಸಿ ವಿಜು ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತಿನ್ ತೆರಳುತ್ತಿದ್ದ ಬೈಕ್ ಮತ್ತು ಶ್ರವಣ್ ಚಲಾಯಿಸಿಕೊಂಡು ಹೋಗು ತ್ತಿದ್ದ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಶ್ರವಣ್ ಬೈಕಿನಲ್ಲಿದ್ದ ವಿಜು ಕೂಡ ಗಾಯಗೊಂಡಿದ್ದಾರೆ.
ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮೃತ್ಯು: ದೂರು
ಉಡುಪಿ, ಜೂ.17: ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ ಮೃತಪಟ್ಟ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತರನ್ನು ಪಾಂಗಾಳ ಸದಾಡಿಯ ಗಂಗಾಧರ ಪೂಜಾರಿ ಹಾಗೂ ಗೀತಾ ಪೂಜಾರಿ ದಂಪತಿಯ ಮಗಳು ಶ್ರುತಿ ಸುವರ್ಣ(24) ಎಂದು ಗುರುತಿಸಲಾಗಿದೆ. ಶ್ರುತಿ ಪೂಜಾರಿ ಹೆರಿಗೆಗಾಗಿ ಜೂ.6ರಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ 7:30ಕ್ಕೆ ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಛಾಯಲತಾ ಆಕೆಯನ್ನು ಪರಿಶೀಲಿಸಿ ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಿದರು.
ಮರುದಿನ ನಸುಕಿನ ವೇಳೆ 1:30ಗಂಟೆ ಸುಮಾರಿಗೆ ಶ್ರುತಿ ಪೂಜಾರಿಗೆ ಸಿಝೇರಿಯನ್ ಮೂಲಕ ಹೆರಿಗೆ ಮಾಡಿಸಿ, ತಾಯಿ ಹಾಗೂ ಮಗು ಆರೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ 3:30ಕ್ಕೆ ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸುವಂತೆ ಸೂಚಿಸಿದರು. ಆದರೆ ಶ್ರುತಿ ಸುವರ್ಣ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 7:30ಕ್ಕೆ ಮೃತಪಟ್ಟರು. ‘ನನ್ನ ಮಗಳ ಸಾವಿಗೆ ಡಾ.ಛಾಯಲತಾ ಹೆರಿಗೆ ಸಮಯದಲ್ಲಿ ತೋರಿದ ನಿರ್ಲಕ್ಷವೇ ಕಾರಣ’ ಎಂದು ಗೀತಾ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಹಳೆ ಸಾಮಗ್ರಿ ಹರಾಜು
ಮಂಗಳೂರು, ಜೂ.15: ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿರುವ ನಿರುಪಯುಕ್ತ ಪೀಠೋ ಪಕರಣಗಳ ಹರಾಜು ಜೂ.22ರಂದು ಪೂರ್ವಾಹ್ನ 11ಗಂಟೆಗೆ ನಡೆಯಲಿದೆ ಆಸಕ್ತರು ಹರಾಜಿನಲ್ಲಿ ಪಾಲ್ಗೊಂಡು ತಮಗೆ ಬೇಕಾದ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು ಮಾಹಿತಿಗೆ ಲೋಕಾಯುಕ್ತ ಎಸ್ಪಿ ಕಚೇರಿ, ಉರ್ವಸ್ಟೋರ್ ಮಂಗಳೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಹೊಂಡಕ್ಕೆ ಬಿದ್ದ ದನ ಪಾರು
ಬೆಳ್ತಂಗಡಿ, ಜೂ. 17: ಹೊಂಡಕ್ಕೆ ದನ ಬಿದ್ದು ಅದೃಷ್ಟವಶಾತ್ ಬದುಕುಳಿದ ಘಟನೆ ಗುರುವಾಯನಕರೆ ಸಮೀಪ ನಡೆದಿದೆ.
ಕಳೆದ ಒಂದು ವರ್ಷದ ಹಿಂದೆ ಮೆಸ್ಕಾಂನವರು ಕಂಬ ನೆಡಲು ರಸ್ತೆ ಬದಿ ಸುಮಾರು 8ಅಡಿ ಆಳದ ಹೊಂಡವೊಂದನ್ನು ತೋಡಿದ್ದರು. ಆದರೆ ಅದರಲ್ಲಿ ಕಂಬವನ್ನು ನೆಡದೆ, ಅದನ್ನು ಮುಚ್ಚದೆ ನಿರ್ಲಕ್ಷ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಾಯಕ್ಕೆ ಆಹ್ವಾನಕಾರಿಯಾಗಿದ್ದ ಹೊಂಡಕ್ಕೆ ಕಳೆದೆರಡು ದಿನಗಳ ಹಿಂದೆ ದನವೊಂದು ಅಕಸ್ಮಾತ್ತಾಗಿ ಜಾರಿಬಿದ್ದಿದೆ. ಮೂರು ದಿನಗಳಿಂದ ನಾಪತ್ತೆಯಾಗಿದ್ದ ದನ ಗುಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಯಿಂದ ಮೇಲಕ್ಕೆತ್ತಲಾಯಿತು. ಮೆಸ್ಕಾಂನ ನಿರ್ಲಕ್ಷವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಯುವತಿಗೆ ಕಿರುಕುಳ: ಆರೋಪಿಯ ಬಂಧನ
ಕಾಸರಗೋಡು, ಜೂ.17: ಬಸ್ಸು ತಂಗುದಾಣದಲ್ಲಿ ದಲಿತ ಯುವತಿಗೆ ಯುವಕ ನೋರ್ವ ಕಿರುಕುಳ ನೀಡಲೆತ್ನಿಸಿದ ಘಟನೆ ಗುರುವಾರ ರಾತ್ರಿ ಬದಿಯಡ್ಕ ಬಸ್ಸು ತಂಗುದಾಣದಲ್ಲಿ ನಡೆದಿದೆ. ಆರೊಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿ ದ್ದಾರೆ. ಬಂಧಿತನನ್ನು ಚೇರ್ಕಳ ಅಲೆಕ್ಕಲದ ಎಂ. ಕೆ. ಪ್ರಶಾಂತ್ (36) ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ ಕೆಲಸ ಮುಗಿಸಿ ಬದಿಯಡ್ಕ ತಲುಪಿದ್ದ ಯುವತಿ ಇನ್ನೊಂದು ಬಸ್ಸಿಗಾಗಿ ಕಾಯುತ್ತಿದ್ದಾಗ ಈತ ಕಿರುಕುಳ ನೀಡಿದ್ದ ಎನ್ನಲಾಗಿದೆ. ಯುವತಿಯ ಬೊಬ್ಬೆ ಕೇಳಿ ಆಗಮಿಸಿದ ಸ್ಥಳೀಯರು ಕೂಡಲೇ ಪ್ರಶಾಂತ್‌ನನ್ನ್ನು ಹಿಡಿದು ಬದಿಯಡ್ಕ ಪೊಲೀಸರಿಗೆ ಒಪ್ಪಿಸಿದರು.
ಟಿಪ್ಪರ್ ಢಿಕ್ಕಿ: ಬೈಕ್ ಸವಾರ ಮೃತ್ಯು
ಬ್ರಹ್ಮಾವರ, ಜೂ.17: ಕಾಡೂರು ಗ್ರಾಮ ನೀರ್ಮಕ್ಕಿ ತಿರುವಿನಲ್ಲಿ ಟಿಪ್ಪರ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಮಂದಾರ್ತಿಯ ಹೊಸ್ಕರೆ ನಿವಾಸಿ ರಘುರಾಮ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಬೈಕ್‌ನಲ್ಲಿ ಕೊಕ್ಕರ್ಣೆಯಿಂದ ಮಂದಾರ್ತಿ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಬೈಕಿಗೆ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ರಘುರಾಮ ಶೆಟ್ಟಿಯವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂ.17ರಂದು ಬೆಳಗ್ಗೆ 5:30ಕ್ಕೆೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







