ಅತ್ಯಾಚಾರ ಸಂತ್ರಸ್ತೆ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ
ಅಹ್ಮದಾಬಾದ್, ಜೂ.17: ಅತ್ಯಾಚಾರ ಸಂತ್ರಸ್ತೆ 14ರ ಹರೆಯದ ಹುಡುಗಿಯೊಬ್ಬಳ 22 ವಾರಗಳ ಗರ್ಭವನ್ನು ತೆಗೆಯಲು ಗುಜರಾತ್ ಹೈಕೋರ್ಟ್ ಅನುಮತಿ ನೀಡಿದೆ. ಬಾಲಕಿಯ ಅತ್ಯುತ್ತಮ ಹಿತಾಸಕ್ತಿಗಾಗಿ ಗರ್ಭಪಾತ ಮಾಡಿಸಬೇಕೆಂದು ಅದು ಹೇಳಿದೆ.
ಗರ್ಭಪಾತದ ಸಾಧ್ಯತೆಯ ಬಗ್ಗೆ ವೈದ್ಯಕೀಯ ಅಭಿಪ್ರಾಯ ಹಾಗೂ ಸಂತ್ರಸ್ತೆ ಎದುರಿಸಿರುವ ಸಾಮಾಜಿಕ ಪರಿಸ್ಥಿತಿಗಳ ಕುರಿತು ಎಚ್ಚರಿಕೆಯಿಂದ ವಿಚಾರಣೆ ನಡೆಸಿದ ಬಳಿಕ, ಸಂತ್ರಸ್ತೆಯ ಹಿತಾಸಕ್ತಿಯ ದೃಷ್ಟಿಯಿಂದ ಗರ್ಭಪಾತ ಮಾಡಿಸುವುದು ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯಿ ಸಿದೆಯೆಂದು ನ್ಯಾಯಮೂರ್ತಿ ಸೋನಿಯಾ ಗೋಕಾನಿ ಕಳೆದ ವಾರ ನೀಡಿದ ಆದೇಶವೊಂದರಲ್ಲಿ ತಿಳಿಸಿದ್ದಾರೆ.
ಸಂತ್ರಸ್ತೆಯ ಸೂಕ್ಷ್ಮ ಆರೋಗ್ಯ ಸ್ಥಿತಿ ಹಾಗೂ ದುರ್ಬಲ ಹಿಮೊಗ್ಲೋಬಿನ್ ಮಟ್ಟದ ಹಿನ್ನೆಲೆಯಲ್ಲಿ ವೈದ್ಯರ ತಂಡವೊಂದು ಇನ್ನೊಮ್ಮೆ ಆಕೆಯ ಪರೀಕ್ಷೆ ನಡೆಸುವುದು ಹಾಗೂ ಅವಳ ಸುರಕ್ಷೆ ಯನ್ನು ಖಚಿತಪಡಿಸುವುದು ಅಗತ್ಯವೆಂದು ಅವರು ಹೇಳಿದ್ದಾರೆ.
21ರ ಹರೆಯದ ಪರಿಚಿತ ಯುವಕನೊಬ್ಬನಿಂದ ಅತ್ಯಾಚಾರ ಕ್ಕೊಳಗಾದ ಬಾಲಕಿ ಗರ್ಭಿಣಿಯೆಂಬುದು ತಿಳಿದೊಡನೆಯೇ ಆಕೆಯ ಹೆತ್ತವರು 2016ರ ಮೇ 22ರಂದು ರಾಜಕೋಟಾದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.ಅತ್ಯಾಚಾರಿ ಈಗ ಕಾರಾಗೃಹದಲ್ಲಿದ್ದಾನೆ.
ಮಗಳ ಗರ್ಭಪಾತಕ್ಕೆ ಅನುಮತಿ ಕೋರಿ ಹೆತ್ತವರು ಮೊದಲು ರಾಜಕೋಟಾದ ನ್ಯಾಯಾಲಯವೊಂದಕ್ಕೆ ಹೋಗಿದ್ದರು. ಆದರೆ, ಅದು ಅನುಮತಿ ನೀಡಲು ನಿರಾ ಕರಿಸಿದುದರಿಂದ ಅವರು ಹೈಕೋರ್ಟ್‌ನ ಮೆಟ್ಟಲೇರಿದ್ದರು.
ವೈದ್ಯಕೀಯ ಗರ್ಭಪಾತ ಕಾಯ್ದೆ 20 ವಾರಗಳ ಗರ್ಭವನ್ನು ಮಾತ್ರ ತೆಗೆಯಲು ಅವಕಾಶ ನೀಡಿದೆ.





