ಭ್ರೂಣಲಿಂಗ ಪತ್ತೆ ಕಾಯ್ದೆ ಬಗ್ಗೆ ಇರಲಿ ಎಚ್ಚರ
ಮಂಗಳೂರು, ಜೂ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಭ್ರೂಣಲಿಂಗ ಪತ್ತೆ ತಂತ್ರಜ್ಞಾನವೂ ಇದಕ್ಕೆ ಕಾರಣವಾಗುತ್ತಿರುವ ಅನುಮಾನವಿದೆ. ಕಾಯ್ದೆಯ ದುರ್ಬಳಕೆ ಸಾಬೀತಾದಲ್ಲಿ 3 ವರ್ಷಗಳ ಜೈಲು ಶಿಕ್ಷೆ ಜೊತೆಗೆ 10,000 ರೂ. ದಂಡ ಹಾಗೂ ಇದೇ ಅಪರಾಧ ಮತ್ತೊಮ್ಮೆ ಮಾಡಿದ್ದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ 50,000 ರೂ.ವರೆಗೆ ದಂಡ ವಿಧಿಸಲಾಗುವುದು.
ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ. ಭಾರತದಲ್ಲಿ 2011ರ ಅಂಕಿ-ಅಂಶಗಳ ಪ್ರಕಾರ ಮಹಿಳೆಯರ ಮತ್ತು ಪುರುಷರ ಜನಸಂಖ್ಯೆಯ ಅನುಪಾತ 1,000ಕ್ಕೆ 940 ಇದೆ. ರಾಜ್ಯದಲ್ಲಿ ಲಿಂಗಾನುಪಾತ 1,000ಕ್ಕೆ 973 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,020 ಇದೆ. ಆದರೆ ಮಕ್ಕಳ ಲಿಂಗಾನುಪಾತ ಆತಂಕಕಾರಿ ಪ್ರಮಾಣದಲ್ಲಿದೆ. 2011ರ ಜನಗಣತಿಯಲ್ಲಿ ದೇಶದಲ್ಲಿ ಮಕ್ಕಳ ಲಿಂಗಾನುಪಾತ 1,000ಕ್ಕೆ 914 ಇದ್ದರೆ, ಕರ್ನಾಟಕದಲ್ಲಿ 948 ಇತ್ತು. ಜಿಲ್ಲೆಯ ಲಿಂಗಾನುಪಾತ 1,020 ಇದ್ದರೂ ಮಕ್ಕಳ ಲಿಂಗಾನುಪಾತ 948 ಮಾತ್ರ ಇದೆ. ಪುರುಷ ಮತ್ತು ಮಹಿಳೆಯರ ಸಮಾನ ಅನುಪಾತ ಕಾಪಾಡಲು ಭ್ರೂಣಲಿಂಗ ಪತ್ತೆ ಮಾಡುವ ತಂತ್ರಜ್ಞಾನ ದುರ್ಬಳಕೆ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರದ ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಮಾಡುವ ತಂತ್ರಜ್ಞಾನ (ದುರ್ಬಳಕೆ ಮತ್ತು ತಡೆ) ಕಾಯ್ದೆ 1996ರಿಂದಲೇ ಜಾರಿಯಲ್ಲಿದೆ.
ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಹೆಣ್ಣು ಭ್ರೂಣಗಳು ಚರಂಡಿಯಲ್ಲಿ, ಮುಳ್ಳಿನ ಪೊದೆಯಲ್ಲಿ, ಕಸದ ತೊಟ್ಟಿಯಲ್ಲಿ ಸೇರುತ್ತಿರುವ ಪ್ರಸಂಗಳೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಭ್ರೂಣ ಲಿಂಗ ಪತ್ತೆ ಕಾಯ್ದೆ ಬಗ್ಗೆ ಅರಿತುಕೊಂಡು ಅದನ್ನು ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸುವುದು ಕರ್ತವ್ಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.





